ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಟೈಟ್ ಶೆಡ್ಯೂಲ್ ಇರುವ ಸ್ಟಾರ್ ಹೀರೋ ಅಂದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್. ಅವರ ಬಳಿ ಹೆಚ್ಚು ಕಡಿಮೆ ಎಂದರೂ ಐದಕ್ಕಿಂತ ಹೆಚ್ಚಿನ ಸಿನಿಮಾ ಸ್ಕ್ರಿಪ್ಟ್ಗಳು ಇರುತ್ತವೆ. ಸತತ ಸಿನಿಮಾಗಳನ್ನು ಮಾಡುತ್ತಿರುವ ಅವರು 2022ರಲ್ಲಿ ಕೊನೆಯದಾಗಿ ಪ್ಯಾನ್ ಇಂಡಿಯಾ ಸಿನಿಮಾ 'ವೇದ'ದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 'ಘೋಸ್ಟ್' ಸಿನಿಮಾವಾಗಿ ಬ್ಯುಸಿಯಾದರು. ಸದ್ಯ ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, 'ಪೋಸ್ಟ್' ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
ಶಿವಣ್ಣ ಯೋಗರಾಜ್ ಭಟ್ ನಿದೇಶನದ 'ಕರಟಕ ದಮನಕ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಕೂಡ ಇದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ನಿರ್ದೇಶಕ ಭಟ್ರೂ ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಈ ಮೊದಲೇ ತಿಳಿಸಿದೆ. ಇದರ ಬೆನ್ನಲ್ಲೇ 'ಮಫ್ತಿ' ಸಿನಿಮಾದ ಸೀಕ್ವೆಲ್ ಆದ 'ಬೈರತಿ ರಣಗಲ್'ನಲ್ಲೂ ಶಿವರಾಜ್ಕುಮಾರ್ ಬಣ್ಣ ಹಚ್ಚುತ್ತಿದ್ದಾರೆ. ಇದರ ಚಿತ್ರೀಕರಣವೂ ಇದೇ ಜೂನ್ 10ರಿಂದ ಪ್ರಾರಂಭವಾಗಿದೆ.
'ವೇದ' ನಂತರ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ 'ಬೈರತಿ ರಣಗಲ್' ಆಗಿರಲಿದೆ. ಇದನ್ನೂ ಮಫ್ತಿಗೆ ಆಕ್ಷನ್ ಕಟ್ ಹೇಳಿದ ನರ್ತನ್ ಅವರೇ ನಿರ್ದೇಶಿಸುತ್ತಿದ್ದಾರೆ. ಆದರೆ ಇದೆಲ್ಲದಕ್ಕಿಂತಲೂ ಮುಂಚಿತವಾಗಿ ಶಿವಣ್ಣನ ಹೆಸರಿನಲ್ಲಿ ಸಿನಿಮಾವೊಂದು ಘೋಷಣೆಯಾಗಿತ್ತು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ನಿರ್ದೇಶಿಸಿದ್ದ ಸಚಿನ್ ಬಿ.ರವಿ ಎರಡು ವರ್ಷಗಳ ಹಿಂದೆ 'ಸಾಗಾ ಆಫ್ ಅಶ್ವತ್ಥಾಮ' ಎಂಬ ಸಿನಿಮಾವನ್ನು ಶಿವಣ್ಣನ ಜೊತೆ ಮಾಡುವುದಾಗಿ ಪ್ರಕಟಿಸಿದ್ದರು.
ಶಿವರಾಜ್ಕುಮಾರ್ ಅಭಿನಯದ 127ನೇ ಚಿತ್ರ ಅಶ್ವತ್ಥಾಮ ಆಗಿರಲಿದೆ ಎಂದು ಕಳೆದ ವರ್ಷ ಶಿವಣ್ಣನ ಬರ್ತ್ಡೇ ದಿನ ಪೋಸ್ಟರ್ವೊಂದನ್ನು ಲಾಂಚ್ ಮಾಡುವ ಮೂಲಕ ಸಚಿನ್ ಘೋಷಿಸಿದ್ದರು. ಆದರೆ 'ವೇದ' ಶಿವರಾಜ್ಕುಮಾರ್ ಅಭಿನಯದ 125ನೇ ಚಿತ್ರವಾಗಿದೆ. ಇದರ ಬೆನ್ನಲ್ಲೇ ಶಿವಣ್ಣ ಕರಟಕ ದಮನಕ ಮತ್ತು ಬೈರತಿ ರಣಗಲ್ ಮಾಡುತ್ತಿರುವುದರಿಂದ 127ನೇ ಚಿತ್ರವಾದ 'ಸಾಗಾ ಆಫ್ ಅಶ್ವತ್ಥಾಮ ಕೈ ಬಿಡಲಾಯಿತೇ?' ಎಂಬ ಅನುಮಾನ ಎಲ್ಲರಲ್ಲಿ ಕಾಡಿತ್ತು.