ಸದಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಟಾಲಿವುಡ್ ಸ್ಟಾರ್ ಡೈರೆಕ್ಟರ್ ಎಸ್ಎಸ್ ರಾಜಮೌಳಿ ಅವರೀಗ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ. ಸದ್ಯ ಸಿನಿಮಾಗಳಿಗೆ ಸಣ್ಣ ಬ್ರೇಕ್ ಕೊಟ್ಟು ತಮ್ಮ ಫ್ಯಾಮಿಲಿ ಟೈಂ ಅನ್ನು ಎಂಜಾಯ್ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ತಮಿಳುನಾಡು ಪ್ರವಾಸಕ್ಕೆ ತೆರಳಿದ್ದ ಅವರು ಅಲ್ಲಿನ ಹಲವು ಪ್ರಸಿದ್ಧ ದೇವಸ್ಥಾನಗಳಿಗೆ ಕುಟುಂಬ ಸಮೇತ ಭೇಟಿ ಕೊಟ್ಟಿದ್ದಾರೆ. ತಮಿಳುನಾಡು ಪ್ರವಾಸವನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಇಂದು ದೇವಸ್ಥಾನಗಳಿಗೆ ಭೇಟಿ ಕೊಟ್ಟಿರುವ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಈ ಪಯಣ ನನಗೆ ಹೆಚ್ಚಿನ ಉತ್ಸಾಹ ನೀಡಿದೆ ಎಂದು ಹೇಳಿದ್ದಾರೆ.
ರಾಜಮೌಳಿ ಟ್ವೀಟ್:''ಬಹಳ ದಿನಗಳಿಂದ ತಮಿಳುನಾಡಿನ ದೇವಸ್ಥಾನಗಳಿಗೆ ರೋಡ್ ಟ್ರಿಪ್ ಮೂಲಕ ಹೋಗಬೇಕೆಂದು ಯೋಚಿಸುತ್ತಿದ್ದೆ. ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದು, ಇದಕ್ಕಾಗಿ ನನ್ನ ಮಗಳಿಗೆ ಧನ್ಯವಾದ ಹೇಳಬೇಕು. ಜೂನ್ ಕೊನೆಯ ವಾರದಲ್ಲಿ ಶ್ರೀ ರಂಗಂ, ದರಸುರಂ, ಬೃಹದೀಶ್ವರರ್ ಕೊಯಿಲ್, ರಾಮೇಶ್ವರಂ, ಕನಡುಕಥನ್, ತೂತುಕುಡಿ, ಮಧುರೈ ಸೇರಿದಂತೆ ಮುಂತಾದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿದ್ದೆವು. ಆ ದೇವಾಲಯಗಳಲ್ಲಿನ ಶಿಲ್ಪಕಲೆಗಳು ನನ್ನನ್ನು ಬೆರಗುಗೊಳಿಸಿದವು. ಸೊಗಸಾದ ವಾಸ್ತುಶಿಲ್ಪ, ಅದ್ಭುತ ಇಂಜಿನಿಯರಿಂಗ್ ಕೆಲಸ ಮತ್ತು ಪಾಂಡ್ಯರ ಆಳವಾದ ಆಧ್ಯಾತ್ಮಿಕ ಚಿಂತನೆ, ಅನೇಕ ರಾಜರುಗಳ ವಿಷಯಗಳು ಮೋಡಿ ಮಾಡುವಂತಿದ್ದವು. ಮಂತ್ರಕೂಡಂ, ಕುಂಭಕೋಣಂನಲ್ಲಿ ಉತ್ತಮ ಊಟ ಲಭ್ಯವಾಯಿತು. ರಾಮೇಶ್ವರಂನಲ್ಲಿರುವ ಕಾಕಾ ಹೋಟೆಲ್ ಮುರುಗನ್ ಮೆಸ್‌ನ ಆಹಾರ ಅದ್ಭುತವಾಗಿತ್ತು. ನಾನು ಒಂದು ವಾರದಲ್ಲಿ 2-3 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದೇನೋ. 3 ತಿಂಗಳ ವಿದೇಶಿ ಪ್ರಯಾಣ ಮತ್ತು ಅಲ್ಲಿನ ಆಹಾರದ ನಂತರ, ಈ ಹೋಮ್ ಲ್ಯಾಂಡ್ ಪ್ರವಾಸವು ಅದ್ಭುತ ಅನುಭನ ನೀಡಿದೆ'' ಎಂದು ಬರೆದುಕೊಂಡಿದ್ದಾರೆ. ಅವರು ಶೇರ್ ಮಾಡಿರುವ ವಿಡಿಯೋ ಬಹಳ ಸುಂದರವಾಗಿದ್ದು, ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ.