ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲಿ ಮಿಂಚು ಹರಿಸಿದ್ದ ನಟ ಅನಿರುದ್ಧ್ ಜತ್ಕರ್ ಅವರು ಎಸ್ ನಾರಾಯಣ್ ನಿರ್ದೇಶನದ ಸೂರ್ಯವಂಶ ಧಾರವಾಹಿ ಮೂಲಕ ಸ್ಮಾಲ್ ಸ್ಕ್ರೀನ್ಗೆ ಕಮ್ ಬ್ಯಾಕ್ ಮಾಡುವ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಮತ್ತೆ ಅನಿರುದ್ಧ್ ನಟನೆಗೆ ತಡೆ ಬೀಳುವ ಲಕ್ಷಣಗಳು ಕಾಣುತ್ತಿವೆ.
ಜೊತೆ ಜೊತೆಯಲಿ ಸೀರಿಯಲ್ ನಿರ್ಮಾಪಕ, ನಿರ್ದೇಶಕ ಆರೂರು ಜಗದೀಶ್ ಜೊತೆ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಎರಡು ವರ್ಷಗಳವರೆಗೆ ಅನಿರುದ್ಧ್ ಅವರನ್ನು ಯಾವುದೇ ಧಾರಾವಾಹಿ ಅಥವಾ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳದಂತೆ ಕಿರುತೆರೆ ನಿರ್ಮಾಪಕರ ಸಂಘ ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿತ್ತು. ಚಿತ್ರಮಂಡಳಿಯಿಂದ ಈ ಸಂಬಂಧ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಆದ್ರೆ ಈ ನಡುವೆ ನಿರ್ದೇಶಕ ಎಸ್ ನಾರಾಯಣ್ ಜೊತೆ ಸೂರ್ಯವಂಶ ಎಂಬ ಹೊಸ ಸೀರಿಯಲ್ ಮೂಲಕ ಮತ್ತೆ ನಿಮ್ಮ ಮುಂದೆ ಬರಲಿದ್ದೇನೆ ಅಂತ ಸ್ವತಃ ಅನಿರುದ್ಧ್ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಅನಿರುದ್ಧ್ ನಟನೆ ಮೇಲಿನ ನಿಷೇಧ ವಿಷಯವಾಗಿ ಕಿರುತೆರೆಯ ನಿರ್ಮಾಪಕರು, ಕಲಾವಿದರೊಂದಿಗೆ ಇಂದು ಎಸ್ ನಾರಾಯಣ್ ಒಂದು ಸಭೆ ನಡೆಸಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯಿಂದ ಅನಿರುದ್ಧ್ ಅವರನ್ನು ಧಾರವಾಹಿಯಿಂದ ಹೊರಹಾಕಲಾಗಿದೆ. ಎರಡು ವರ್ಷ ಅನಿರುದ್ಧ್ ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ. ಹೀಗೆ ಇರಬೇಕಾದ್ರೆ ಅನಿರುದ್ಧ್ ಜೊತೆ ಹೇಗೆ ಸೂರ್ಯವಂಶ ಸೀರಿಯಲ್ ಮಾಡ್ತೀರಾ ಅಂತಾ ಕಿರುತೆರೆ ನಿರ್ಮಾಪಕರ ಸಂಘದವರು ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ:ವಿಷ್ಣುವರ್ಧನ್ ಅಭಿನಯಿಸಿದ್ದ 'ಸೂರ್ಯವಂಶ'ವೀಗ ಅಳಿಯ ನಟಿಸುತ್ತಿರುವ ಧಾರವಾಹಿಯ ಟೈಟಲ್
ಬಳಿಕ ಮಾತನಾಡಿದ ನಿರ್ದೇಶಕ ಎಸ್ ನಾರಾಯಣ್, ಅನಿರುದ್ಧ್ ವಿಚಾರವಾಗಿ ಹೀಗೆಲ್ಲ ಘಟನೆಗಳು ನಡೆದಿರೋದು ನನ್ನ ಗಮನಕ್ಕೆ ಬಂದಿರಲಿಲ್ಲ. ಇನ್ನು ವಿಷ್ಣುವರ್ಧನ್ ನಿರ್ಮಾಪಕರನ್ನು ಅನ್ನದಾತರು ಅಂತಾ ಕರೆಯುತ್ತಿದ್ದರು. ಹಾಗೆ ಇರಬೇಕಾದ್ರೆ ಕಿರುತೆರೆ ನಿರ್ಮಾಪಕರ ಮಾತಿಗೆ ಗೌರವ ಕೊಡಬೇಕಿದೆ. ನಟ ಅನಿರುದ್ಧ್ ಅವರ ಮಾತನ್ನೂ ಕೇಳಬೇಕಿದೆ. ಇದೇ ವಿಚಾರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಸಭೆ ಇದೆ. ಸಭೆಯಲ್ಲಿ ಫಿಲ್ಮ್ ಚೇಂಬರ್ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನು ನೋಡಿಕೊಂಡು ನಾನು ನಿರ್ಧಾರ ಮಾಡುತ್ತೇನೆಂದು ತಿಳಿಸಿದರು.