ಇಡೀ ಭಾರತೀಯ ಸಿನಿ ರಂಗದಲ್ಲಿ ಸ್ಯಾಂಡಲ್ವುಡ್ನ ಐಕಾನ್ ಅಂತಾ ಕರೆಯಿಸಿಕೊಳ್ಳುವ ಏಕೈಕ ನಟ ದಿ.ಡಾ. ರಾಜ್ ಕುಮಾರ್. ಈ ನಟಸಾರ್ವಭೌಮ ರೂಢಿಸಿಕೊಂಡು ಬಂದ ಕೆಲ ಸಿದ್ಧಾಂತಗಳು ಪ್ರತೀ ನಾಗರೀಕರಿಗೂ, ಚಿತ್ರರಂಗದವರಿಗೂ ಮಾದರಿ. ಅವರು ಕೊನೆಯವರೆಗೂ ಪಾಲಿಸಿಕೊಂಡು ಬಂದ ತತ್ವ ಅಂದರೆ ಸರಳತೆ. ಕಿರಿಯರೇ ಇರಲಿ ಅಥವಾ ಹಿರಿಯರೇ ಇರಲಿ ಎಲ್ಲರಿಗೂ ಸರಿ ಸಮಾನವಾಗಿ ಕೊಡುತ್ತಿದ್ದ ಆ ಗೌರವ ಹಾಗೂ ಅಭಿಮಾನಿಗಳನ್ನು ದೇವರಿಗೆ ಹೋಲಿಸಿದ ಭಾರತೀಯ ಚಿತ್ರರಂಗದ ಮೊದಲ ನಟ ಅಂದ್ರೆ ಅದು ಡಾ. ರಾಜ್ ಕುಮಾರ್.
ಈ ಪರಿಪಾಠವನ್ನು ಇವತ್ತಿಗೂ ದೊಡ್ಮನೆ ಮಂದಿ ಪಾಲಿಸುತ್ತಾ ಬರುತ್ತಿದ್ದಾರೆ. ದಿ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಂದೆಯ ತತ್ವ ಸಿದ್ಧಾಂತಗಳನ್ನು ಹೆಚ್ಚಾಗಿ ಪಾಲಿಸುತ್ತಿದ್ದ ಕಾರಣ ಅವರು ಅಭಿಮಾನಿಗಳ ದೃಷ್ಟಿಯಲ್ಲಿ ಇಂದು ದೇವರಾಗಿದ್ದಾರೆ.
ನಿರ್ದೇಶಕ ಆರ್ ಚಂದ್ರು ಸರಳತೆ:ಇಂತಹ ಮಹಾನ್ ನಟನ ಆದರ್ಶದ ಹಾದಿಯಲ್ಲಿ ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು ಕೂಡ ಇದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಆರ್ ಚಂದ್ರು ಅವರು ಶಿವ ರಾಜ್‍ಕುಮಾರ್, ಉಪೇಂದ್ರ, ಅಜಯ್ ರಾವ್, ನೆನಪಿರಲಿ ಪ್ರೇಮ್ ಅಂತಹ ಸ್ಟಾರ್ಗಳ ಸಿನಿಮಾಗಳನ್ನು ಡೈರೆಕ್ಷನ್ ಮಾಡಿ ಸ್ಟಾರ್ ನಿರ್ದೇಶಕ ಅಂತಾ ಕರೆಸಿಕೊಂಡಿದ್ದಾರೆ. ಆದರೂ ಸ್ಟಾರ್ ಡಮ್ ಅನ್ನು ತಲೆಗೆ ಅಂಟಿಸಿಕೊಳ್ಳದೇ ಬಹಳ ಸಿಂಪಲ್ ಆಗಿ ಜೀವನ ನಡೆಸುತ್ತಿದ್ದಾರೆ ನಿರ್ದೇಶಕ ಆರ್. ಚಂದ್ರು.
ಬಹುಕೋಟಿ ವೆಚ್ಚದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗು ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರೋ ಪ್ಯಾನ್ ಇಂಡಿಯಾ ಚಿತ್ರ ಕಬ್ಜಕ್ಕೆ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶಕ ಆರ್ ಚಂದ್ರು ಅವರಿಗೆ ಸಿನಿಮಾ ಮೇಲಿರುವ ಪ್ರೀತಿ, ಗೌರವವನ್ನು ಮೆಚ್ಚಲೇಬೇಕು. ನಾಲ್ಕು ವಿಭಿನ್ನ ಕಥೆಯ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ನಿರ್ದೇಶಕ ಆರ್. ಚಂದ್ರು ಬಹಳ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ, ಸರಳ ಜೀವನ ನಡೆಸುತ್ತಾರೆ ಅನ್ನೋದು ಚಿತ್ರರಂಗದವರ, ಅಭಿಮಾನಿಗಳ ಮಾತು.
ಕೆಜಿಎಫ್ ಸಿನಿಮಾ ಸ್ಫೂರ್ತಿ ಎಂದ ಚಂದ್ರು: ಆರ್ ಚಂದ್ರು ಯಶಸ್ವಿ ನಿರ್ದೇಶಕ ಆಗಿದ್ದರೂ ಕೂಡ ಯಾವುದೇ ಸಂಕೋಚ ಇಲ್ಲದೇ ನಾನು ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಮಾಡೋದಿಕ್ಕೆ ಸ್ಫೂರ್ತಿ ಕೆಜಿಎಫ್ ಸಿನಿಮಾವೇ ಕಾರಣ ಅಂತಾ ತಿಳಿಸಿದ್ದಾರೆ. ಹೌದು, ನಿರ್ದೇಶಕ ಆರ್. ಚಂದ್ರು ನಾನು ಎಂಬ ಅಹಂ ಅನ್ನು ತಲೆಗೆ ಅಂಟಿಸಿಕೊಳ್ಳದೇ, ಇವತ್ತಿಗೂ ಹೊಸ ನಿರ್ದೇಶಕನಂತೆ ತಮ್ಮ ಕೆಲಸ ಮಾಡುತ್ತಿದ್ದಾರೆ.