ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪ್ರಚಂಡ ಜಯಭೇರಿ ಬಾರಿಸಿದೆ. 135 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕೈ ನಾಯಕರು ಕರುನಾಡಲ್ಲಿ ಅಧಿಕಾರ ಪಡೆದುಕೊಂಡಿದ್ದಾರೆ. 66 ಸ್ಥಾನಗಳನ್ನು ಮಾತ್ರ ಗೆದ್ದು, ಸೋತಿರುವ ಬಿಜೆಪಿಗೆ ನಿರಾಶೆ ಉಂಟಾಗಿದೆ. ಈ ಮಧ್ಯೆ ಬೊಮ್ಮಾಯಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಮುಂದಿನ ಸಿಎಂ ಆಯ್ಕೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ರಾಜ್ಯದ ಅನೇಕ ಕಾಂಗ್ರೆಸ್ ಬೆಂಬಲಿಗರು ಮಾಜಿ ಸಿಎಂ ಸಿದ್ದರಾಮಯ್ಯ ಹೆಸರನ್ನೇ ಸೂಚಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಸ್ಯಾಂಡಲ್ವುಡ್ ಖ್ಯಾತ ನಿರ್ದೇಶಕ ಪವನ್ ಕುಮಾರ್ ಒಡೆಯರ್ ಇದೀಗ ಸಿದ್ದರಾಮಯ್ಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
'ಗೂಗ್ಲಿ' ಸಿನಿಮಾ ಖ್ಯಾತಿಯ ಪವನ್ ಒಡೆಯರ್ ಅವರು ಬಸವರಾಜ ಬೊಮ್ಮಾಯಿ ವಿರುದ್ಧ ಮತ್ತು ಸಿದ್ದರಾಮಯ್ಯ ಪರ ಮಾತನಾಡಿದ್ದಾರೆ. ಎರಡು ಟ್ವೀಟ್ಗಳನ್ನು ಮಾಡಿರುವ ನಿರ್ದೇಶಕ, ಬೊಮ್ಮಾಯಿ ಅವರ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕನ್ನಡದ ಮೇಲಿರುವ ಅಭಿಮಾನವನ್ನು ಕೊಂಡಾಡಿದ್ದಾರೆ. ಸದ್ಯ ಅವರ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಪವನ್ ಒಡೆಯರ್ ಟ್ವೀಟ್ನಲ್ಲೇನಿದೆ?: ಮಾಜಿ ಸಿಎಂ ಸಿದ್ದರಾಮಯ್ಯ ಅವರು 'ಡೊಳ್ಳು' ಸಿನಿಮಾ ವೀಕ್ಷಿಸುವ ಕೆಲವೊಂದು ಫೋಟೋಗಳನ್ನು ಪವನ್ ಒಡೆಯರ್ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿ ಪ್ರತ್ಯೇಕ ಎರಡು ಕ್ಯಾಪ್ಶನ್ಗಳನ್ನು ಹಾಕಿದ್ದಾರೆ. "ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳು ಕುಣಿತದ ಕುರಿತು ನಿರ್ಮಿಸಿದ್ದ "ಡೊಳ್ಳು" ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ, ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು. ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ. ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ. ಕನ್ನಡಿಗರು ಮುಟ್ಟಾಳರಲ್ಲ" ಎಂದು ಬಸವರಾಜ ವಿರುದ್ಧ ಕಿಡಿಕಾರಿದ್ದಾರೆ.