ಭಾರತೀಯ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರ ಸಾಲಿನಲ್ಲಿ ಅಟ್ಲೀ ಕೂಡ ಒಬ್ಬರು. ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಇವರು ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಜೊತೆ 'ಜವಾನ್' ಸಿನಿಮಾ ಮಾಡಿ ವಿಶ್ವಾದ್ಯಂತ ಕ್ರೇಜ್ ಗಳಿಸಿದ್ದಾರೆ. ನಯನತಾರಾ, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ಸೆಪ್ಟೆಂಬರ್ 7ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಈ ಸಿನಿಮಾ ನಂತರ ಅಟ್ಲೀ ಅವರ ಮುಂದಿನ ನಿರ್ದೇಶನದ ಮೇಲೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ. ಸಿನಿ ಪ್ರೇಮಿಗಳು ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ. ಹಲವಾರು ಸಂದರ್ಶನಗಳಲ್ಲಿ ತಮ್ಮ ಹೊಸ ಯೋಜನೆಗಳ ಕುರಿತಾಗಿ ಅಟ್ಲೀ ಮಾತನಾಡಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಮತ್ತು ವಿಜಯ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದ ಅಟ್ಲೀ ಇದೀಗ ಮತ್ತೊಬ್ಬ ಸ್ಟಾರ್ ತಮಿಳು ನಟ ಅಜಿತ್ ಕುಮಾರ್ ಜೊತೆ ಕೆಲಸ ಮಾಡಲು ರೆಡಿಯಾಗಿದ್ದಾರೆ.
'ನಾನು ಅಜಿತ್ ಕುಮಾರ್ ಜೊತೆ ಶೀಘ್ರದಲ್ಲೇ ಸಿನಿಮಾ ಮಾಡುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಅವರಿಗೆ ಕಥೆಯೂ ಸಿದ್ಧವಾಗಿದೆ' ಎಂದು ಅಟ್ಲೀ ಹೇಳಿದ್ದಾರೆ. "ಅಜಿತ್ ಕುಮಾರ್ ಅವರಿಗೆ ಸೂಕ್ತವಾದ ಕಥೆ ನನ್ನ ಬಳಿ ಇದೆ. ಅದರ ಮೇಲೆ ಇನ್ನೂ ಕೆಲಸ ಮಾಡಬೇಕಾಗಿದೆ. ಅವರಲ್ಲಿ ಕಥೆಯ ಬಗ್ಗೆ ಹೇಳಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಅಜಿತ್ ನನ್ನ ಕಥೆಯನ್ನು ಒಪ್ಪಿಕೊಂಡರೆ, ಸೂಪರ್ ಹಿಟ್ ಚಿತ್ರವೊಂದು ಮೂಡಿ ಬರಲಿದೆ. ಅವರು ನನ್ನನ್ನು ಕರೆಯುವುದಕ್ಕೆ ಕಾಯುತ್ತಿದ್ದೇನೆ. ಕರೆದ ಕೂಡಲೇ ಹೋಗಿ ಕಥೆ ಹೇಳುತ್ತೇನೆ. ಅವರು ತುಂಬಾ ಒಳ್ಳೆಯ ಮನುಷ್ಯ. ನಾನು ಕಷ್ಟದಲ್ಲಿದ್ದಾಗ ಕರೆದು ಸಾಂತ್ವನ ಹೇಳಿದ್ದರು" ಎಂದು ಹೇಳಿದ್ದಾರೆ.