ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಟ ದಿಗಂತ್. ಸ್ಯಾಂಡಲ್ವುಡ್ನ ದೂದ್ ಪೇಡಾ ಅಂತಾನೇ ಫೇಮಸ್. ಕ್ಯೂಟ್ ಹೀರೋ ದಿಗಂತ್ ಸದ್ಯ 'ಪೌಡರ್' ಅಂತಿದ್ದಾರೆ. ಹೌದು, 'ಪೌಡರ್' ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರದಲ್ಲಿ ದಿಗಂತ್ ಅಭಿನಯಿಸುತ್ತಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟನ ಹೊಸ ಚಿತ್ರವಿದು.
ಪೌಡರ್ ಮೊದಲ ಹಂತದ ಚಿತ್ರೀಕರಣ; ಮೈಸೂರಿನಲ್ಲಿ ಈ 'ಪೌಡರ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. 30 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ದಿಗಂತ್, ಧನ್ಯಾ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅಚ್ಯುತ್ ಕುಮಾರ್, ಅನಿರುದ್ಧ್ ಆಚಾರ್ಯ, ರವಿಶಂಕರ್ ಗೌಡ ಸೇರಿದಂತೆ ಮೊದಲಾದ ಪ್ರತಿಭಾವಂತ ಕಲಾವಿದರು ಭಾಗಿ ಆಗಿದ್ದರು. ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಶೀಘ್ರದಲ್ಲೇ ಬೆಂಗಳೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗುತ್ತಿದೆ.
'ಪೌಡರ್' ಒಂದು ಹಾಸ್ಯಮಯ ಚಿತ್ರ. ಒಂದು ಸಣ್ಣ ಊರಿನ ಯುವಕರಿಗೆ ದೊಡ್ಡ ಪ್ರಮಾಣದ ಕೊಕೇನ್ ಸಿಗುತ್ತದೆ. ಒಂದು ಕಡೆ ಆ ಕೊಕೇನ್ ಹುಡುಕಾಟದಲ್ಲಿ ದುಷ್ಟರ ಗುಂಪು. ಇನ್ನೊಂದು ಕಡೆ ಆ ಕೊಕೇನ್ ಮಾರಿ ದಿಢೀರ್ ಶ್ರೀಮಂತರಾಗಬೇಕೆಂದು ಅಂದುಕೊಳ್ಳುವ ಯುವಕರ ಗುಂಪು. ಅಲ್ಲದೇ, ತನ್ನ ಅಧಿಪತ್ಯ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಓರ್ವ ಮಾಸ್ಟರ್ ಮೈಂಡ್ ಪರ್ಸನಾಲಿಟಿ. ಈ ಹಾವು ಏಣಿ ಆಟದಲ್ಲಿ ಗೆಲ್ಲೋರು ಯಾರು? ಎಂಬುದನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ. ಜನಾರ್ದನ್ ಚಿಕ್ಕಣ್ಣ ಕಥೆ ಬರೆದು, ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.