ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಸೇವಿಸಿದ್ದಾರೆ ಎನ್ನುವ ಆರೋಪದ ಮೇಲೆ ತಮ್ಮ ಮೇಲೆ ಎಫ್ಐಆರ್ ದಾಖಲಾಗಿರುವ ಕುರಿತಂತೆ ಎಲ್ವಿಶ್ ಯಾದವ್ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ. ಈ ಸಂಬಂಧದ ಆರೋಪಗಳ ಬಗ್ಗೆ ಹಿಂದಿ ಬಿಗ್ ಬಾಸ್ ಒಟಿಟಿ 2 ವಿನ್ನರ್ ಹಾಗೂ ಸೋಷಿಯಲ್ ಮೀಡಿಯಾ ಸೆನ್ಸೇಷನ್, ಯೂಟ್ಯೂಬರ್ ಎಲ್ವಿಶ್ ಯಾದವ್ ಕೊನೆಗೂ ಮೌನ ಮುರಿದಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಎಕ್ಸ್( ಹಿಂದಿನ ಟ್ವಿಟರ್) ಹಾಗೂ ಇನ್ಸ್ಟಾಗ್ರಾಂ ಖಾತೆಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಎಲ್ವಿಶ್ ಯಾದವ್, ತಮ್ಮ ವಿರುದ್ಧ ಬಂದಿರುವ ಆರೋಪಗಳು ಆಧಾರರಹಿತವಾಗಿವೆ. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತನಿಖೆಗಳನ್ನು ಎದುರಿಸಲು ತಾವು ಸಿದ್ಧ ಎಂದು ಅವರು ಹೇಳಿಕೊಂಡಿದ್ದಾರೆ.
ಅದರ ಜೊತೆಗೆ, ಸರಿಯಾದ ಸಾಕ್ಷಿಗಳಿಲ್ಲದೇ ತಮ್ಮ ವಿರುದ್ಧ ಯಾವುದೇ ಲೇಖನಗಳನ್ನು ಪ್ರಕಟಿಸಬೇಡಿ. ದಯವಿಟ್ಟು ನನ್ನ ಹೆಸರನ್ನು ಹಾಳು ಮಾಡಬೇಡಿ ಮತ್ತು ನನ್ನ ವಿರುದ್ಧ ಏನೇ ಆರೋಪಗಳು ಬಂದರೂ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ವಿಡಿಯೋದಲ್ಲಿ ಬಿಗ್ಬಾಸ್ ಒಟಿಟಿ 2 ವಿನ್ನರ್ ಎಲ್ವಿಶ್ ಯಾದವ್ ಮಾಧ್ಯಮಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಒಟಿಟಿ- 2 ವಿಜೇತ ಎಲ್ವಿಶ್ ಯಾದವ್ ಸೇರಿ ಐದು ಜನರ ಮೇಲೆ, ದೆಹಲಿಯಲ್ಲಿ ರೇವ್ ಪಾರ್ಟಿಗಳನ್ನು ಆಯೋಜಿಸಿ, ಅಲ್ಲಿ ಹಾವಿನ ವಿಷ ಸೇವಿಸಿರುವ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಎಲ್ವಿಶ್ ಯಾದವ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ.
ಎಲ್ವಿಶ್ ಯಾದವ್ ಆಯೋಜಿಸಿದ್ದ ರೇವ್ ಪಾರ್ಟಿಗಳಿಗೆ ಹಾವು ಹಾಗೂ ಅವುಗಳ ವಿಷವನ್ನು ಸರಬರಾಜು ಮಾಡಿದ ಆರೋಪದ ಮೇಲೆ ನೋಯ್ಡಾದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬಂಧಿತ ಆರೋಪಿಗಳಿಂದ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳನ್ನು ಮತ್ತು ಹಾವಿನ ವಿಷವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೀಗ ತಮ್ಮ ಮೇಲೆ ಬಂದಿರುವ ಆರೋಪಗಳನ್ನು ನಿರಾಕರಿಸಿರುವ ಬಿಗ್ ಬಾಸ್ OTT ವಿಜೇತ ಎಲ್ವಿಶ್ ಯಾದವ್, ಹಾವಿನ ವಿಷ ಸೇವಿಸಲಾಗಿದೆ ಎಂದು ಹೇಳಲಾದ ರೇವ್ ಪಾರ್ಟಿಗಳಿಗೂ ತನಗೂ ಯಾವುದೇ ಸಂಬಂಧ ಇಲ್ಲ. ಆದರೆ ಸಂಬಂಧ ಇದೆ ಎಂಬ ಆಧಾರ ರಹಿತ ಸುದ್ದಿಗಳು ಬಿತ್ತರವಾಗುತ್ತಿವೆ. ಇದು ನಿಜವಲ್ಲ, ಇಂತಹ ಸುದ್ದಿಗಳನ್ನು ಮಾಡಬೇಡಿ ಎಂದು ಅವರು ತಮ್ಮ ವಿಡಿಯೋ ಹೇಳಿಕೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ :ಬಿಗ್ ಬಾಸ್ ಕ್ಯಾಪ್ಟನ್ ಸ್ಥಾನಕ್ಕೆ ವಿನಯ್: 'ಆನೆ'ಗೆ ಹೆದರಲ್ಲವೆಂದ ಸಂಗೀತಾ!