ಸಿನಿಮಾ ಎಂಬ ಕಲರ್ ಫುಲ್ ದುನಿಯಾಗೆ ಪ್ರತಿಭಾವಂತ ಕಲಾವಿದರು ವಿಭಿನ್ನ ಕಂಟೆಂಟ್ ಜೊತೆಗೆ ಬರ್ತಿದ್ದಾರೆ. ಅಂತೆಯೇ ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗಿರುವ, ರಾಮ್ ದೀಪ್ ನಿರ್ದೇಶನದ 'ಡೈಮಂಡ್ ಕ್ರಾಸ್' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಹೊಸಪೇಟೆ ಉದ್ಯಮಿ ಮನೀಶ್, ಖ್ಯಾತ ನಟ ಮಿತ್ರ ಹಾಗೂ ಅವರ ಸ್ನೇಹಿತರ ಮನೀಶ್ & ಮಿತ್ರ ಎಂಟರ್ಟೈನ್ಮೆಂಟ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ ಚಿತ್ರದ ಟೀಸರ್ ಅನಾವರಣಗೊಂಡಿದೆ. ಬೆಂಗಳೂರಿನ ಪಾತಕ ಲೋಕದಲ್ಲಿ ಗುರುತಿಸಿಕೊಂಡಿದ್ದ ಜೇಡರಹಳ್ಳಿ ಕೃಷ್ಣಪ್ಪ ಸಿನಿಮಾ ಟೀಸರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಜೈಕೃಷ್ಣ ಕೂಡ ಉಪಸ್ಥಿತರಿದ್ದರು.
ಈ ವೇಳೆ, ನಟ ಮಿತ್ರ ಮಾತನಾಡಿ, "ಹೊಸಪೇಟೆ ಉದ್ಯಮಿ ಮನೀಶ್ ನನ್ನ ಮಿತ್ರರು. ಮನೀಶ್ ಅವರಿಗೆ ಸಿನಿಮಾ ನಿರ್ಮಾಣ ಮಾಡುವ ಆಸಕ್ತಿಯಿತ್ತು. ಆದರೆ, ನಾನು ಮೊದಲು ಸಿನಿಮಾ ನಿರ್ಮಾಣ ಮಾಡಬೇಡಿ. ಸಾಕಷ್ಟು ಒಳ್ಳೆಯ ಚಿತ್ರಗಳು ನಿರ್ಮಾಣವಾಗಿರುತ್ತದೆ. ಅಂತಹ ಚಿತ್ರಗಳನ್ನು ವಿತರಣೆ ಮಾಡುವ ಮೂಲಕ ಚಿತ್ರಮಂದಿರಗಳಿಗೆ ತರುವ ಪ್ರಯತ್ನ ಮಾಡಿ. ಆನಂತರ ಸಿನಿಮಾ ಮಾಡಿ ಎಂದು ಸಲಹೆ ನೀಡಿದೆ. ಅದಕ್ಕೆ ಮನೀಶ್ ಒಪ್ಪಿದರು. ನನ್ನ ಕೆಲವು ಸ್ನೇಹಿತರು ಇದಕ್ಕೆ ಜೊತೆಯಾದರು. ಈಗ ಮನೀಶ್ & ಮಿತ್ರ ಎಂಟರ್ಟೈನ್ಮೆಂಟ್ ಸಂಸ್ಥೆಯ ಮೂಲಕ ರಾಮ್ ದೀಪ್ ನಿರ್ದೇಶನದ 'ಡೈಮಂಡ್ ಕ್ರಾಸ್' ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ" ಎಂದರು.