'ಅದ್ಧೂರಿ' ಚಿತ್ರದ ನಂತರ ಧ್ರುವ ಸರ್ಜಾ ಹಾಗೂ ನಿರ್ದೇಶಕ ಎ.ಪಿ ಅರ್ಜುನ್ ಕಾಂಬಿನೇಷನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ 'ಮಾರ್ಟಿನ್' ಚಿತ್ರವು ಸದ್ಯ ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇತ್ತೀಚೆಗೆ ತೆರೆಕಂಡ ಚಿತ್ರಗಳಲ್ಲಿ 'ಮಾರ್ಟಿನ್' ಕೂಡ ಚಂದನವನದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಆಗಲಿದೆ ಅಂತ ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ. 'ಪೊಗರು' ಯಶಸ್ಸಿನ ಬಳಿಕ ತೆರೆಗೆ ಬರುತ್ತಿರುವ 'ಮಾರ್ಟಿನ್' ಚಿತ್ರದಲ್ಲಿ ಧ್ರುವ ಸರ್ಜಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಲ್ಲಿಯೂ ಕುತೂಹಲ ಮೂಡಿಸಿದೆ. ಆದ್ರೆ ಮಾರ್ಟಿನ್ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಈ ಹಿಂದೆ ಈ ಚಿತ್ರವನ್ನು ದಸರಾ ಹಬ್ಬಕ್ಕೆ ಅಂದ್ರೆ, ಸೆ.30ಕ್ಕೆ ಬಿಡುಗಡೆ ಮಾಡುವುದೆಂದು ನಿರ್ಧಾರವಾಗಿತ್ತು. ಅದಕ್ಕೆ ಎಲ್ಲ ರೀತಿಯ ಸಿದ್ಧತೆಯೂ ನಡೆದಿತ್ತು. ಆದರೆ, ಅರ್ಜುನ್ ಸರ್ಜಾ ಅವರ ತಾಯಿ ಹಾಗೂ ಧ್ರುವ ಸರ್ಜಾ ಅವರ ಅಜ್ಜಿಯೂ ಆದ ಲಕ್ಷ್ಮಿದೇವಮ್ಮ ಅವರು ನಿಧನಕ್ಕೂ ಮುನ್ನ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆ ಸಮಯದಲ್ಲಿ ಆತಂಕದಲ್ಲಿದ್ದ ಧ್ರುವ ಸರ್ಜಾ ಬಾಕಿಯಿದ್ದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. 10-12 ದಿನಗಳ ಕಾಲ ಶೂಟ್ ಮಾಡಬೇಕಿದ್ದ ಆ ಭಾಗವನ್ನು ಸದ್ಯದಲ್ಲೇ ಚಿತ್ರೀಕರಿಸಲು ತಂಡ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸ್ವಲ್ಪ ಬಾಕಿ ಇರುವುದರಿಂದ ಅಂದುಕೊಂಡ ದಿನಾಂಕದಲ್ಲಿ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸದ್ಯದಲ್ಲೇ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ನಿರ್ದೇಶಕ ಎಪಿ ಅರ್ಜುನ್ ಅವರು ತಿಳಿಸಿದ್ದಾರೆ.