ಕರ್ನಾಟಕ

karnataka

ETV Bharat / entertainment

'ಮಾರ್ಟಿನ್' ಚಿತ್ರದ ಟೀಸರ್​ ಹ್ಯಾಕ್​: ಧ್ರುವ ಸರ್ಜಾ ಸಿನಿಮಾಗೆ ಕಿಡಿಗೇಡಿಗಳ ಕಾಟ - ಈಟಿವಿ ಭಾರತ ಕನ್ನಡ

ನಟ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಚಿತ್ರದ ಟೀಸರ್​ ಅನ್ನು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ನಿರ್ಮಾಪಕ ಉದಯ್ ಕೆ ಮೆಹ್ತಾ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.

martin movie teaser
'ಮಾರ್ಟಿನ್'

By

Published : Apr 24, 2023, 7:38 PM IST

'ಮಾರ್ಟಿನ್' ಚಿತ್ರದ ಟೀಸರ್​

'ಮಾರ್ಟಿನ್' ಟೈಟಲ್​ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಜಾನ್ ಟಾಕ್ ಆಗುತ್ತಿರುವ ಸಿನಿಮಾ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಮಾರ್ಟಿನ್ ಚಿತ್ರದ ಆಫೀಶಿಯಲ್ ಟೀಸರ್ ನೋಡಿದ ಇಡೀ ಭಾರತೀಯ ಚಿತ್ರರಂಗ ಫಿದಾ ಆಗಿದೆ. ಈ ಟೀಸರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ಜನ ನೋಡುವ ಮೂಲಕ ಕಡಿಮೆ ಸಮಯದಲ್ಲಿ 10 ಲಕ್ಷ ಜನ ನೋಡಿದ ಟೀಸರ್ ಎಂಬ ಹೆಗ್ಗಳಿಗೆ ಮಾರ್ಟಿನ್ ಪಾತ್ರವಾಗಿದೆ. ಇದೀಗ ಸಿನಿಮಾದ ಟೀಸರ್ ಬರೋಬ್ಬರಿ 83 ಮಿಲಿಯನ್ ಜನರಿಂದ ವೀಕ್ಷಿಸಲ್ಪಡುವ ಮೂಲಕ ಹೊಸ ದಾಖಲೆ ಬರೆದಿದ್ದು, ನಿರ್ದೇಶಕ ಎ ಪಿ ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಕೆ ಮೆಹ್ತಾ ಅವರ ಆತ್ಮವಿಶ್ವಾಸವನ್ನು ದುಪ್ಪಟ್ಟು ಮಾಡಿದೆ.

ಹೌದು, ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದ ಟೀಸರ್ ನೋಡಿದವರೆಲ್ಲಾ, ಇದು ಕನ್ನಡ ಸಿನಿಮಾವಾದರೂ ಹಾಲಿವುಡ್ ಶೈಲಿಯಲ್ಲಿ ಮೂಡಿಬಂದಿದೆ ಎಂದು ಹೇಳುತ್ತಿದ್ದಾರೆ. ಟೀಸರ್ ನಲ್ಲಿ ಒಂದೊಂದು ಸೀನ್, ಸನ್ನಿವೇಶಗಳು ಹಾಲಿವುಡ್ ಶೈಲಿಯ ಮೇಕಿಂಗ್ ಅನ್ನು ನೆನಪಿಸುತ್ತದೆ. ಇನ್ನು ಧ್ರುವ ಸರ್ಜಾ ಅಂತೂ ರಗಡ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಗರು ಹುಡುಗನ ಎಂಟ್ರಿಗೆ ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಫಿದಾ ಆಗಿದ್ದು, ಅವರ ಅಭಿಮಾನಿ ಬಳಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ.

ಸದ್ಯ ಮಾರ್ಟಿನ್ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿ ಒಂದು ಕಡೆ ಬ್ಯುಜಿಯಾಗಿದ್ರೆ, ನಿರ್ಮಾಪಕ ಉದಯ್ ಮೆಹ್ತಾ ಮತ್ತು ನಿರ್ದೇಶಕ ಎಪಿ ಅರ್ಜುನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರವನ್ನು ತಲುಪಿಸಲು ಸಾಕಷ್ಟು ಪ್ಲಾನ್​ಗಳನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಮಾರ್ಟಿನ್ ಚಿತ್ರತಂಡಕ್ಕೆ ಕಿಡಿಗೇಡಿಗಳು ಶಾಕ್​ವೊಂದನ್ನು ನೀಡಿದ್ದಾರೆ. ಈ ಸಿನಿಮಾದ ಟೀಸರ್ ಈ ಮಟ್ಟಕ್ಕೆ ರಿಚ್ ಆಗಿರೋದನ್ನ ಸಹಿಸದ ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡುವ ಮೂಲಕ ಮಾರ್ಟಿನ್ ಚಿತ್ರತಂಡಕ್ಕೆ ಆಘಾತವನ್ನು ನೀಡಿದ್ದಾರೆ. ವಿಷ್ಯ ತಿಳಿದ ನಿರ್ಮಾಪಕ ಉದಯ್ ಕೆ ಮೆಹ್ತಾ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಈ ಈಟಿವಿ ಭಾರತ ಜೊತೆ ಮಾತನಾಡಿದ ನಿರ್ಮಾಪಕ ಉದಯ್ ಕೆ ಮೆಹ್ತಾ, "ನಮ್ಮ ಕನ್ನಡ ಸಿನಿಮಾ ಟೀಸರ್​ಗೆ ಇಷ್ಟು ದೊಡ್ಡ ಮಟ್ಟದಲ್ಲಿ ಮನ್ನಣೆ ಸಿಕ್ಕಿರೋದು ನಮಗೆ ಹೆಮ್ಮೆಯ ವಿಷ್ಯ. ಇದು ಕನ್ನಡ ಚಿತ್ರರಂಗದ ತಾಕತ್. ಇದನ್ನು ಸಹಿಸದ ಕಿಡಿಗೇಡಿಗಳು ಟೀಸರ್ ಹ್ಯಾಕ್ ಮಾಡಿರೋದು ಬಹಳ ನೋವಿನ ಸಂಗತಿ. ಇದು ಬೇರೆ ಸಿನಿಮಾಗಳಿಗೆ ತೊಂದರೆ ಆಗಬಾರದು ಅಂತಾ ನಾನು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದೇನೆ" ಎಂದು ಹೇಳಿದರು.

ಇದೊಂದು ಔಟ್ ಅಂಡ್ ಔಟ್ ಸಾಹಸಮಯ ಚಿತ್ರವಾಗಿದ್ದು, ಇದರಲ್ಲಿ ನಮ್ಮ ದೇಶ ಪ್ರೇಮ, ಒಂದು ಮುದ್ದಾದ ಲವ್ ಸ್ಟೋರಿ, ಹಾಗೇ ಫ್ಯಾಮಿಲಿ ಕಥೆಯನ್ನು ಒಳಗೊಂಡಿದೆ. ಧ್ರುವ ಸರ್ಜಾ ಜೋಡಿಯಾಗಿ ವೈಭವಿ ಶಾಂಡಿಲ್ಯಾ ನಟಿಸಿದ್ದು, ಅನ್ವೇಶಿ ಜೈನ್‌, ನಿಕಿತೀನ್‌ ಧೀರ್‌ ಸೇರಿದಂತೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದ್ದಾರೆ. ಬೆಂಗಳೂರು, ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ಮಾರ್ಟಿನ್ ಚಿತ್ರದ ಶೂಟಿಂಗ್​ ಮಾಡಲಾಗಿದೆ. ಇನ್ನು ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿದೆ. ಸಿನಿಮಾದ ಕ್ಲೈಮ್ಯಾಕ್ಸ್‌ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್‌ ಲಕ್ಷ್ಮಣ್‌ ಕಂಪೋಸ್‌ ಮಾಡಿದ್ದಾರೆ.

ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಮಾರ್ಟಿನ್ ಚಿತ್ರದ ಇನ್ನೊಂದು ವಿಶೇಷತೆ ಅಂದ್ರೇ ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಮಹೇಶ್‌ ರೆಡ್ಡಿ ಅವರ ಸಂಕಲನ ಚಿತ್ರಕ್ಕಿದೆ. ಇನ್ನು ಸ್ಯಾಂಡಲ್​ವುಡನ ಖ್ಯಾತ ನಿರ್ಮಾಪಕ ಉದಯ್ ಮೆಹ್ತಾ ಮಾರ್ಟಿನ್ ಚಿತ್ರಕ್ಕೆ ಹಣವನ್ನು ಹೂಡಿದ್ದಾರೆ. ಇದೇ ಮೊದಲ ಬಾರಿಗೆ ಲೆಕ್ಕಾಚಾರ ಹಾಕಿ ನಿರ್ಮಾಪಕ ಉದಯ್ ಮೆಹ್ತಾ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮಾರ್ಟಿನ್ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಹೊಸ ಫಿಟ್ನೆಸ್​ ವಿಡಿಯೋ ಹಂಚಿಕೊಂಡ ನಟಿ ಸಾರಾ: ಜಿಮ್​ನಲ್ಲೂ ಮೇಕಪ್​ ಬಿಡಲ್ವಾ ಎಂದ ನೆಟ್ಟಿಗರು

ABOUT THE AUTHOR

...view details