ಕರ್ನಾಟಕ

karnataka

ETV Bharat / entertainment

Dhoomam: ಇಂದು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಬಹುನಿರೀಕ್ಷಿತ ಚಿತ್ರ 'ಧೂಮಂ' ಬಿಡುಗಡೆ - Dhoomam

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಬಹುನಿರೀಕ್ಷಿತ ಚಿತ್ರ 'ಧೂಮಂ' ಇಂದು ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ.

dhoomam
ಧೂಮಂ

By

Published : Jun 23, 2023, 8:26 AM IST

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್​, 'ಧೂಮಂ' ಚಿತ್ರವನ್ನು ನಿರ್ಮಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಲೂಸಿಯಾ ಮತ್ತು ಯೂಟರ್ನ್​ ಖ್ಯಾತಿಯ ಪವನ್​ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಲಯಾಳಂ ಬಹುಬೇಡಿಕೆಯ ನಟ ಫಹಾದ್​ ಫಾಸಿಲ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಇಂದು ತೆರೆ ಕಾಣಲಿದೆ. 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ 'ಧೂಮಂ' ಕೂಡ ಒಂದಾಗಿದೆ.

ಇಂದು ಮಲಯಾಳಂನಲ್ಲಿ ಮಾತ್ರ ಬಿಡುಗಡೆ ಮಾಡಲು ಯೋಜಿಸಿದ್ದ ಈ ಸಿನಿಮಾವನ್ನು ಕನ್ನಡ ಪ್ರೇಕ್ಷಕರ ಒತ್ತಾಯದ ಮೇರೆಗೆ ಕನ್ನಡ ಭಾಷೆಯಲ್ಲೂ ರಿಲೀಸ್​ ಮಾಡಲಾಗುತ್ತಿದೆ. ಕರ್ನಾಟಕದ ಬರೋಬ್ಬರಿ 150ಕ್ಕೂ ಹೆಚ್ಚು ಪರದೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಕೇರಳದಲ್ಲಿ 300ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಈಗಾಗಲೇ ಟ್ರೇಲರ್​ನಿಂದಲೇ ಟಾಕ್​ನಲ್ಲಿರುವ ಚಿತ್ರದ ಮೇಲೆ ಅಪಾರ ನಿರೀಕ್ಷೆಯಿದೆ.

ಚಿತ್ರದಲ್ಲಿ ಫಹಾದ್​ ಫಾಸಿಲ್​ಗೆ ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಅನೀಸ್ ನಾಡೋಡಿ (ಪ್ರೊಡಕ್ಷನ್​ ಡಿಸೈನ್​) ಮತ್ತು ಪೂರ್ಣಿಮಾ ರಾಮಸ್ವಾಮಿ (ವಸ್ತ್ರ ವಿನ್ಯಾಸ)ವಿರಲಿದೆ.

ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿರುವ ಅವಿ (ಫಹಾದ್ ಫಾಸಿಲ್) ಮತ್ತು ದಿಯಾ (ಅಪರ್ಣ) ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ಸುತ್ತ ಅಪಾಯ ಮತ್ತು ಮನಸ್ಸೊಳಗಿನ ಭಯ ಮೆಟ್ಟಿ ನಿಲ್ಲುವುದಕ್ಕೆ ಅವರಿಬ್ಬರೂ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಈ ಚಿತ್ರದ ಕಥೆ. ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಅವರೇ ರಚಿಸಿದ್ದಾರೆ.

ಈ ಪ್ಯಾನ್​ ಇಂಡಿಯಾ ಸಿನಿಮಾದ ಫಸ್ಟ್​ ಲುಕ್​ ಏಪ್ರಿಲ್​ನಲ್ಲಿ ಅನಾವರಣಗೊಂಡಿತ್ತು. ಆ ಪೋಸ್ಟರ್​ಗೆ 'ಬೆಂಕಿಯಿಲ್ಲದೇ ಹೊಗೆ ಇಲ್ಲ, ಮೊದಲ ಕಿಡಿ ಇಲ್ಲಿದೆ' ಎಂಬ ಕ್ಯಾಪ್ಷನ್​​ ಕೊಟ್ಟು ಗಮನ ಸೆಳೆದಿತ್ತು. ಬಳಿಕ ಬಿಡುಗಡೆಯಾದ ಟ್ರೇಲರ್​ ಹೊಸ ಲೋಕವನ್ನೇ ತೋರಿಸಿತ್ತು. ಇಂದು ಸಿನಿಮಾ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲ್ಮ್ಸ್​ ಮತ್ತು ನಿರ್ದೇಶಕ ಪವನ್​ಗೆ ಸಿನಿ ಪ್ರೇಕ್ಷಕರು ಎಷ್ಟು ಮಾರ್ಕ್ಸ್​ ಕೊಡ್ತಾರೆ ಅನ್ನೋದು ನೋಡಬೇಕಿದೆ.

ಈ ಹಿಂದೆ ಚಿತ್ರದ ಕುರಿತು ಮಾತನಾಡಿದ್ದ ನಿರ್ದೇಶಕ ಪವನ್, ‘ಕಳೆದ ಒಂದು ದಶಕದಿಂದ ಈ ಚಿತ್ರವನ್ನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆ ಹಾಗೂ ಒಂದು ಅದ್ಭುತ ಚಿತ್ರ ಮಾಡುವ ನಿಟ್ಟಿನಲ್ಲಿ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿದ್ದೆ. ಒಂದು ದಶಕದ ನನ್ನ ಕನಸನ್ನು ಇದೀಗ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯು ನನಸು ಮಾಡಿದೆ. ಒಂದು ವಿಭಿನ್ನವಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈಜೋಡಿಸಿದೆ. ಹಲವು ಪ್ರತಿಭಾವಂತರ ತಂಡವನ್ನು ನೀಡಿ ಒಂದೊಳ್ಳೆಯ ಚಿತ್ರ ನೀಡುವುದಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಈ ಚಿತ್ರ ಮತ್ತು ಕಥೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಿದೆ’ ಎಂದಿದ್ದರು.

ಇದನ್ನೂ ಓದಿ:ರಶ್ಮಿಕಾ, ರಣಬೀರ್​ ಅಭಿನಯದ 'ಅನಿಮಲ್​' ಶೂಟಿಂಗ್​ ಕಂಪ್ಲೀಟ್; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ​

ABOUT THE AUTHOR

...view details