ಕರ್ನಾಟಕ

karnataka

ETV Bharat / entertainment

'ಧೂಮ್' ಸಿನಿಮಾ ನಿರ್ದೇಶಕ ಸಂಜಯ್ ಗಧ್ವಿ ಹೃದಯಾಘಾತದಿಂದ ನಿಧನ

Dhoom director Sanjay Gadhvi passed away: ಹೃದಯಾಘಾತದಿಂದ ಬಾಲಿವುಡ್ ನಿರ್ದೇಶಕ ಸಂಜಯ್ ಗಧ್ವಿ ಮೃತಪಟ್ಟಿದ್ದಾರೆ.

director Sanjay Gadhvi died
ನಿರ್ದೇಶಕ ಸಂಜಯ್ ಗಧ್ವಿ ನಿಧನ

By ETV Bharat Karnataka Team

Published : Nov 19, 2023, 2:13 PM IST

Updated : Nov 19, 2023, 2:34 PM IST

'ಧೂಮ್', 'ಮೇರೆ ಯಾರ್ ಕಿ ಶಾದಿ ಹೈ' ಸಿನಿಮಾ ಖ್ಯಾತಿಯ ಬಾಲಿವುಡ್ ನಿರ್ದೇಶಕ ಸಂಜಯ್ ಗಧ್ವಿ ಹೃದಯಾಘಾತದಿಂದ ಇಂದು ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಪತ್ನಿ ಜಿನಾ ಮತ್ತು ಇಬ್ಬರು ಪುತ್ರಿಯರನ್ನು ಗಧ್ವಿ ಅಗಲಿದ್ದಾರೆ. ಪುತ್ರಿ ಸಂಜಿನಾ ಗಧ್ವಿ ತಂದೆಯ ಸಾವಿನ ಕುರಿತು ಮಾಹಿತಿ ನೀಡಿದ್ದಾರೆ.

"ತಂದೆ ಇಂದು ಬೆಳಿಗ್ಗೆ 9.30ಕ್ಕೆ ನಿಧನರಾದರು. ನಮಗೆ ಖಚಿತತೆ ಇಲ್ಲದಿದ್ದರೂ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಿದ್ದೇವೆ. ಅವರು ಅಸ್ವಸ್ಥರಾಗಿರಲಿಲ್ಲ. ಸಂಪೂರ್ಣವಾಗಿ ಆರೋಗ್ಯವಾಗಿದ್ದರು" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವರದಿಗಳಂತೆ, ಲೋಖಂಡವಾಲಾದಲ್ಲಿ ಎಂದಿನಂತೆ ಇಂದು ಬೆಳಿಗ್ಗೆ ವಾಕ್ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ಅತಿಯಾಗಿ ಬೆವರುತ್ತಿದ್ದ ಅವರನ್ನು ತಕ್ಷಣವೇ ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಗಧ್ವಿ ಮೃತಪಟ್ಟರು ಎಂದು ವೈದ್ಯರು ಘೋಷಿಸಿದರು. ಸಂಜೆ ಮುಂಬೈನ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

2000ರಲ್ಲಿ ಮೂಡಿಬಂದ 'ತೇರೆ ಲಿಯೆ' ಸಿನಿಮಾ ಮೂಲಕ ಬಾಲಿವುಡ್​ ಪಯಣ ಆರಂಭವಾಯಿತು. ಬ್ಲಾಕ್​ ಬಸ್ಟರ್ ಹಿಟ್​ ಸಿನಿಮಾಗಳಾದ 'ಧೂಮ್' ಮತ್ತು 'ಧೂಮ್​ 2' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಾಲಿವುಡ್​ನ ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ 'ಯಶ್ ರಾಜ್ ಫಿಲ್ಮ್ಸ್ ಬ್ಯಾನರ್' ಅಡಿಯಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. 2002ರಲ್ಲಿ ಬಂದ 'ಮೇರೆ ಯಾರ್ ಕಿ ಶಾದಿ ಹೈ' 2008ರಲ್ಲಿ ತೆರೆಕಂಡ 'ಕಿಡ್ನ್ಯಾಪ್'​ ಅಂತಹ ಜನಪ್ರಿಯ ಸಿನಿಮಾಗಳಿಗೆ ಆ್ಯಕ್ಷನ್​​ ಕಟ್​ ಹೇಳಿದ್ದಾರೆ. ಮೇರೆ ಯಾರ್ ಕಿ ಶಾದಿ ಹೈ ಸಿನಿಮಾದಲ್ಲಿ ಜಿಮ್ಮಿ ಶೆರ್ಗಿಲ್, ಉದಯ್ ಚೋಪ್ರಾ, ಟುಲಿಪ್ ಜೋಶಿ ಸೇರಿದಂತೆ ಹಲವರು ನಟಿಸಿದ್ದಾರೆ. ಸಂಜಯ್ ದತ್, ಇಮ್ರಾನ್ ಖಾನ್, ಮಿನಿಶಾ ಲಾಂಬಾ ನಟಿಸಿದ 'ಕಿಡ್ನ್ಯಾಪ್' ಸಹ ಪ್ರೇಕ್ಷಕರ ಗಮನ ಸೆಳೆದಿತ್ತು.

ಇದನ್ನೂ ಓದಿ:ವಿಶ್ವಕಪ್‌ ಫೈನಲ್‌ನಲ್ಲಿ ಗೆಲುವು ನಮ್ಮದೇ ಎಂದ ಸೆಲೆಬ್ರಿಟಿಗಳು

2012ರಲ್ಲಿ ಅರ್ಜುನ್ ರಾಂಪಾಲ್ ಅವರನ್ನೊಳಗೊಂಡ ಅಜಬ್ ಗಜಬ್ ಲವ್, 2020ರಲ್ಲಿ ಅಮಿತ್ ಸಾದ್ ಮತ್ತು ರಾಹುಲ್ ದೇವ್ ಅವರನ್ನೊಳಗೊಂಡ ಆಪರೇಷನ್ ಪರಿಂದೆ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಎರಡು ಬ್ಲಾಕ್‌ ಬಸ್ಟರ್‌ ಸಿನಿಮಾಗಳಾದ ಧೂಮ್ ಮತ್ತು ಧೂಮ್ 2 ಮನರಂಜನಾ ಕ್ಷೇತ್ರಕ್ಕೆ ನೀಡಿದ್ದರೂ ಕೂಡ ನಿರ್ದೇಶಕರಾಗಿ ಭವಿಷ್ಯದ ಬೆಳವಣಿಗೆಯು ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ ಎಂದು ಹಲವು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ನರೇಂದ್ರ ಮೋದಿ ಸ್ಟೇಡಿಯಂಗೆ ತಾರೆಗಳ ಮೆರುಗು: ಅನುಷ್ಕಾ, ದೀಪ್​ವಿರ್​ ಸೇರಿ ಹಲವರು- ವಿಡಿಯೋ

ಸಂಜಯ್ ಗಧ್ವಿ ಅವರ ಹಠಾತ್ ನಿಧನದ ಬಗ್ಗೆ ತಿಳಿದ 'ಯಶ್ ರಾಜ್ ಫಿಲ್ಮ್ಸ್ ಸ್ಟುಡಿಯೋ' ನಿರ್ದೇಶಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ಟ್ವೀಟ್​ ಮಾಡಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ "ಅವರು ಸ್ಕ್ರೀನ್​ ಮೇಲೆ ರಚಿಸಿದ ಮ್ಯಾಜಿಕ್ ಅನ್ನು ಎಂದೆಂದಿಗೂ ಸ್ಮರಿಸಲಾಗುವುದು, ಪಾಲಿಸಲಾಗುವುದು. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಬರೆದುಕೊಂಡಿದ್ದಾರೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

Last Updated : Nov 19, 2023, 2:34 PM IST

ABOUT THE AUTHOR

...view details