ಕನ್ನಡ ಚಿತ್ರರಂಗದ ನಟ ನಟಿಯರು ಬಹುಭಾಷಾ ಸಿನಿಮಾಗಳಲ್ಲಿ ಕಮಾಲ್ ಮಾಡುತ್ತಿದ್ದಾರೆ. ಸೂಪರ್ ಹಿಟ್ 'ದಿಯಾ' ಸಿನಿಮಾದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ದೀಕ್ಷಿತ್ ಶೆಟ್ಟಿ 'ದಸರಾ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ನಟನಾಗಿ ಗಡಿ ಮೀರಿ ಅಪಾರ ಸಂಖ್ಯೆಯ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಗೆಳೆಯನಾಗಿ 'ದಸರಾ' ಸಿನಿಮಾದಲ್ಲಿ ಬಣ್ಣ ಹಚ್ಚಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿರುವ ಈ ಚಾಕ್ಲೇಟ್ ಹೀರೋ ಸದ್ಯ ಮಲಯಾಳಂ ಇಂಡಸ್ಟ್ರೀಗೂ ಪಾದಾರ್ಪಣೆ ಮಾಡಿದ್ದಾರೆ.
ಒಪ್ಪೀಸ್ ಸಿನಿಮಾ:ಹೌದು, ಪ್ಯಾರಾ ಸೈಕಲಾಜಿಕಲ್ ಕಥಾಹಂದರ ಹೊಂದಿರುವ 'ಒಪ್ಪೀಸ್' ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ಕೇರಳದಲ್ಲಿ ಸರಳವಾಗಿ ನಡೆದಿದೆ. 10 ವರ್ಷಗಳ ಕಾಲ ವಿದೇಶದಲ್ಲಿದ್ದ ವ್ಯಕ್ತಿ ತಾನು ಹುಟ್ಟಿ ಬೆಳೆದ ಕೇರಳಗೆ ವಾಪಸ್ ಆದಾಗ ಏನಾಗುತ್ತದೆ ಅನ್ನೋದೇ ಕಥೆಯ ತಿರುಳು. ಸೌಜನ್ ಜೋಸೆಫ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಪ್ರದ್ಯುಮ್ನ ಕೊಳ್ಳೇಗಾಲ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎಂ ಜಯಚಂದ್ರನ್ ಮ್ಯೂಸಿಕ್ ಈ ಚಿತ್ರಕ್ಕಿದೆ. 2024ರ ಫೆಬ್ರವರಿಯಿಂದ ಒಪ್ಪೀಸ್ ಸಿನಿಮಾದ ಶೂಟಿಂಗ್ ಶುರುವಾಗಲಿದೆ.
ಮಾರ್ಚ್ 8ಕ್ಕೆ ಬ್ಲಿಂಕ್ ರಿಲೀಸ್:ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಬಂದು 'ದಿಯಾ' ಚಿತ್ರದ ಮೂಲಕ ಪ್ರೇಕ್ಷಕರ ಮನ ಸೆಳೆದಿರುವ ನಟ ದೀಕ್ಷಿತ್ ಶೆಟ್ಟಿ. ಸದ್ಯ ನಟನೀಗ 'ಬ್ಲಿಂಕ್' ಶೀರ್ಷಿಕೆಯ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ರವಿಚಂದ್ರ ಎ.ಜೆ ಎಂಬುವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಶ್ರೀನಿಧಿ ಬೆಂಗಳೂರು ಅವರು ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. 2024ರ ಮಾರ್ಚ್ 8ಕ್ಕೆ ಬ್ಲಿಂಕ್ ಸಿನಿಮಾ ರಿಲೀಸ್ ಆಗಲಿದೆ.