'ಶೋಕ್ದಾರ್', 'ಬಜಾರ್' ಮತ್ತು 'ಬೈ ಟು ಲವ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಧನ್ವೀರ್ ಗೌಡ. ಈ ಸಿನಿಮಾಗಳ ಬಳಿಕ ಧನ್ವೀರ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರ 'ವಾಮನ'. ಬಹುತೇಕ ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿದೆ. ಇದೀಗ 'ವಾಮನ' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವಾ..ವಾ..ವಾಮನ ಅಂತ ಬಜಾರ್ ಹುಡ್ಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ.
ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಸಾಹಿತ್ಯಕ್ಕೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಟ್ಯೂನ್ ನೀಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ 'ವಾಮನ' ನಾಯಕನ ಇಂಟ್ರಡಕ್ಷನ್ ಹಾಡಿಗೆ ಧನ್ವೀರ್ ಜಬರ್ದಸ್ತ್ ಹೆಜ್ಜೆ ಹಾಕಿದ್ದಾರೆ. 'ವಾಮನ' ಸಿನಿಮಾವನ್ನು ಯುವ ನಿರ್ದೇಶಕ ಶಂಕರ್ ರಾಮನ್ ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಿತು. ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, "ಕಥೆಯಲ್ಲಿ ಬರುವ ಪಾತ್ರಗಳಿಗಷ್ಟೇ ಕೌಂಟರ್ ಕೊಡುತ್ತಿರುವುದು, ಬೇರೆ ಯಾರಿಗೂ ಅಲ್ಲ. ನಾಯಕ ಗುಣ ಪಾತ್ರ ನೀರು ಇದ್ದ ಹಾಗೆ. ರಾವಣ, ದುರ್ಯೋಧನ ಇಬ್ಬರನ್ನೂ ಆವರಿಸಿಕೊಳ್ಳುತ್ತಾರೆ. ವಾಮನನ್ನು ಆವರಿಸಿಕೊಳ್ಳುತ್ತಾರೆ. ಸಮಯ ಬಂದಾಗ ದಶಾವತಾರದಲ್ಲಿರುವ ಪಾತ್ರವನ್ನು ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ನಾಲ್ಕ ಆಕ್ಷನ್ ಸೀಕ್ವೆನ್ಸ್ ಇದೆ. ಮಾಸ್ ಆಡಿಯನ್ಸ್ಗೆ ಏನ್ ಬೇಕು ಅದು ಇದೆ. ಕ್ಲಾಸ್ ಆಡಿಯನ್ಸ್ ಬೇಕಾದ ಕಥೆಯು ಇದೆ" ಎಂದರು.
ನಾಯಕ ಧನ್ವೀರ್ ಮಾತನಾಡಿ, "ವಾಮನ ನನ್ನ ಮೂರನೇ ಸಿನಿಮಾ. ಇಂದು ಟೈಟಲ್ ಸಾಂಗ್ ರಿಲೀಸ್ ಮಾಡಿದ್ದೇವೆ. ಈ ತರ ಸಾಂಗ್ ಅನ್ನು ನನ್ನ ಹಿಂದಿನ ಸಿನಿಮಾಗಳಲ್ಲಿ ಎಕ್ಸ್ಪೆಕ್ಟ್ ಮಾಡಿದ್ದೆ. ಆದರೆ ಚೇತನ್ ಸರ್ ನನ್ನ ಹಿಂದೆ ಇಟ್ಟುಬಿಟ್ಟಿದ್ದರು. ಹೋದ ಸಿನಿಮಾದಲ್ಲಿಯೇ ಇದು ಆಗಬೇಕಿತ್ತು. ಅವರ ಬರವಣಿಗೆಗೆ ನಾನು ದೊಡ್ಡ ಫ್ಯಾನ್. ಅವರ ಪದ ಜೋಡಣೆ ಎಲ್ಲವೂ ಚೆನ್ನಾಗಿರುತ್ತದೆ. ಸಿನಿಮಾದಲ್ಲಿ ಒಳ್ಳೆ ಕಂಟೆಂಟ್ ಇದೆ. ಇವತ್ತಿನಿಂದ ನಮ್ಮ ಸಿನಿಮಾ ಪ್ರಮೋಷನ್ ಶುರುವಾಗಿದೆ. ನಿಮ್ಮ ಸಪೋರ್ಟ್ ಇರಲಿ" ಎಂದು ಕನ್ನಡಿಗರಲ್ಲಿ ಕೇಳಿಕೊಂಡರು.