ಬಹುಭಾಷಾ ನಟಿ ತಾಪ್ಸಿ ಪನ್ನು ನಿರ್ಮಾಣದ ಧಕ್ ಧಕ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 13ರಂದು ಥಿಯೇಟರ್ಗಳಲ್ಲಿ ಧಕ್ ಧಕ್ ತೆರೆಕಾಣಲಿದೆ. ಈ ಸಿನಿಮಾ ನಾಲ್ವರು ಧೈರ್ಯಶಾಲಿ ಮಹಿಳೆಯರ ಜೀವನದ ಸುತ್ತ ಸುತ್ತುತ್ತದೆ. ಖರ್ದುಂಗ್ ಲಾ ಪ್ರದೇಶದಲ್ಲಿ ಬೈಕ್ ರೈಡ್ ಮಾಡುವ ವೇಳೆ ಪರಿಚಯವಾಗುವ ನಾಲ್ವರು ಮಹಿಳೆಯರ ಜೀವನದಲ್ಲಾಗುವ ಬದಲಾವಣೆಗಳ ಮೇಲೆ ಕಥೆ ಕೇಂದ್ರಿತವಾಗಿದೆ. ವಯಾಕಾಮ್ 18 ಸ್ಟುಡಿಯೋಸ್ ಮತ್ತು ಬಿಎಲ್‌ಎಂ ಪಿಕ್ಚರ್ಸ್ ಸಹಯೋಗದಲ್ಲಿ ನಟಿ ತಾಪ್ಸಿ ಪನ್ನು ಅವರ ಔಟ್‌ಸೈಡರ್ಸ್ ಫಿಲ್ಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ.
ರತ್ನ ಪಾಠಕ್ ಶಾ, ದಿಯಾ ಮಿರ್ಜಾ, ಫಾತಿಮಾ ಸನಾ ಶೇಖ್ ಮತ್ತು ಸಂಜನಾ ಸಂಘಿ ಅವರಂತಹ ಪ್ರತಿಭಾನ್ವಿತ ಕಲಾವಿದರನ್ನು ಧಕ್ ಧಕ್ ಚಿತ್ರ ಒಳಗೊಂಡಿದೆ. ವಿಶ್ವದ ಅತಿ ಎತ್ತರದ ಪ್ರದೇಶವಾಗಿರುವ ಖರ್ದುಂಗ್ ಲಾ ಹೋಗುವ ಧೈರ್ಯಶಾಲಿ ಬೈಕ್ ಪ್ರಯಾಣಿಕರ ಕಥೆಯನ್ನು ಹೊಂದಿದೆ. ಚಲನಚಿತ್ರದ ಕಥಾವಸ್ತುವು ವೀಕ್ಷಕರನ್ನು ತಲುಪಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಏಕೆಂದರೆ ಈ ಧಕ್ ಧಕ್ ಸಿನಿಮಾ ನಾಲ್ವರು ಮಹಿಳಾ ನಾಯಕಿಯರ ಶಕ್ತಿಯನ್ನು ಪ್ರದರ್ಶಿಸುತ್ತದೆ.
ಧಕ್ ಧಕ್ ಸಿನಿಮಾ ಮೂಲಕ ತರುಣ್ ದುಡೇಜಾ (Tarun Dudeja) ಅವರು ನಿರ್ದೇಶಕರಾಗುತ್ತಿದ್ದಾರೆ. ಇವರು ಆ್ಯಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರವಿದು. ಪಾರಜಾತ್ ಜೋಶಿ (Parijat Joshi) ಹಾಗೂ ತರುಣ್ ದುಡೇಜಾ ಸೇರಿ ಸ್ಕ್ರಿಪ್ಟ್ ರೆಡಿ ಮಾಡಿದ್ದರು. ಬಿಡುಗಡೆಗೆ ಸಜ್ಜಾಗಿರುವ ಸಿನಿಮಾವನ್ನು ವಿಭಿನ್ನವಾಗಿ ಪ್ರಮೋಟ್ ಮಾಡಲಾಗುತ್ತಿದೆ. ನಾಳೆ ಚಿತ್ರತಂಡದಿಂದ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಅಕ್ಟೋಬರ್ 3 ರಂದು ಟ್ರೇಲರ್ ಅನಾವರಣಗೊಳ್ಳಲಿದೆ.