ದಕ್ಷಿಣ ಚಿತ್ರರಂಗದ ನಟ ಕಲ್ಯಾಣ್ ರಾಮ್ ಸದಾ ಹೊಸ ಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೊಸತನಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಖ್ಯಾತ ನಟನ ಮುಂದಿನ ಬಹು ನಿರೀಕ್ಷಿತ ಸಿನಿಮಾ 'ಡೆವಿಲ್'. ಶೀರ್ಷಿಕೆಯೇ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಫಸ್ಟ್ ಗ್ಲಿಂಪ್ಸ್ ಮೂಲಕ ಸಖತ್ ಸದ್ದು ಮಾಡಿರುವ ಈ ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಗೂಢಾಚಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಲವು ವಿಚಾರಗಳಿಂದ ಸಿನಿಪ್ರಿಯರ ಗಮನ ಸೆಳೆದಿರುವ ಡೆವಿಲ್ ಚಿತ್ರತಂಡ ಇದೀಗ ಪವರ್ ಫುಲ್ ಪೊಲಿಟಿಕಲ್ ಲೇಡಿ ಲೀಡರ್ ಅನ್ನು ಪರಿಚಯಿಸಿದೆ.
ಪ್ರಬಲ ರಾಜಕಾರಣಿ ಮಣಿಮೇಕಲಾ ಪಾತ್ರದಲ್ಲಿ ಮಾಳವಿಕಾ: 'ಡೆವಿಲ್' ಸಿನಿಮಾ ಅಂಗಳಕ್ಕೆ ಮಾಳವಿಕಾ ನಾಯರ್ ಎಂಟ್ರಿ ಕೊಟ್ಟಿದ್ದಾರೆ. ಮಣಿಮೇಕಲಾ ಎಂಬ ಪ್ರಬಲ ರಾಜಕಾರಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜಕಾರಣಿಯಂತೆ ಬಿಳಿ ಬಣ್ಣದ ಕಾಟನ್ ಸೀರೆ ಧರಿಸಿ ಭಾಷಣ ಮಾಡುತ್ತಿರುವ ಮಾಳವಿಕಾ ನಾಯರ್ ಅವರ ಫಸ್ಟ್ ಲುಕ್ ಅನಾವರಣಗೊಳಿಸಲಾಗಿದೆ. ಪೋಸ್ಟರ್ನಲ್ಲಿ ಶಾಂತಿಯ ಸಂಕೇತ ಪಾರಿವಾಳವೂ ಇದೆ. ರಾಜಕಾರಣಿ ಪಾತ್ರದಲ್ಲಿ ಪವರ್ ಫುಲ್ ಲುಕ್ ಬೀರಿದ್ದಾರೆ.
ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಅರ್ಪಿಸುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿ ಅಭಿಷೇಕ್ ನಾಮಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ 'ಡೆವಿಲ್' ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ ನೀಡಿದರೆ, ಸೌಂದರ್ಯ ರಾಜನ್ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಡೆವಿಲ್ ಸಿನಿಮಾ ತಯಾರಾಗುತ್ತಿದ್ದು, ಮುಂದಿನ ತಿಂಗಳು ನವೆಂಬರ್ 24 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.