ದಕ್ಷಿಣ ಚಿತ್ರರಂಗದ ನಟ ಕಲ್ಯಾಣ್ ರಾಮ್ ಸದಾ ಹೊಸ ಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೊಸತನಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಖ್ಯಾತ ನಟನ ಮುಂದಿನ ಬಹು ನಿರೀಕ್ಷಿತ ಸಿನಿಮಾ 'ಡೆವಿಲ್'. ಶೀರ್ಷಿಕೆಯೇ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಫಸ್ಟ್ ಗ್ಲಿಂಪ್ಸ್ ಮೂಲಕ ಸಖತ್ ಸದ್ದು ಮಾಡಿರುವ ಈ ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಗೂಢಾಚಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಲವು ವಿಚಾರಗಳಿಂದ ಸಿನಿಪ್ರಿಯರ ಗಮನ ಸೆಳೆದಿರುವ 'ಡೆವಿಲ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.
ಫಸ್ಟ್ ಗ್ಲಿಂಪ್ಸ್, ಪೋಸ್ಟರ್ ಹಾಗೂ ಹಾಡುಗಳಿಂದ ಸಖತ್ ಸದ್ದು ಮಾಡಿರುವ 'ಡೆವಿಲ್' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಬ್ರಿಟಿಷರ ಅವಧಿಯಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರ ಇದಾಗಿದ್ದು, ಒಂದು ಕೊಲೆಯ ಸುತ್ತ ಸಿನಿಮಾ ಸಾಗುತ್ತದೆ. 'ಡೆವಿಲ್'ನಲ್ಲಿ ನಂದಮೂರಿ ಕಲ್ಯಾಣ್ ರಾಮ್ ಗೂಢಾಚಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ಗಳೊಂದಿಗೆ ಕಲ್ಯಾಣ್ ರಾಮ್ ಅಬ್ಬರಿಸಿದ್ದಾರೆ. ಸಂಯುಕ್ತಾ ಮೆನನ್ ನಾಯಕಿಯಾಗಿ ಅಭಿನಯಿಸಿದ್ದು, ಮಾಳವಿಕಾ ನಾಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಅರ್ಪಿಸುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿ ಅಭಿಷೇಕ್ ನಾಮಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ 'ಡೆವಿಲ್' ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ ನೀಡಿದರೆ, ಸೌಂದರ್ಯ ರಾಜನ್ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಡೆವಿಲ್ ಸಿನಿಮಾ ತಯಾರಾಗಿದ್ದು, ಇದೇ ಡಿಸೆಂಬರ್ 29 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.
ಇನ್ನೂ, ಕಲ್ಯಾಣ್ ರಾಮ್ ಅವರು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಸ್ಟಾರ್ ಡಮ್ ಹೊಂದಿರುವ ನಟ. ಅತ್ಯುತ್ತಮ ಅಭಿನಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಹೊಸ ಬಗೆಯ ಕಥೆಗಳಿಗೆ ಹೆಚ್ಚಿನ ಆದ್ಯತೆ ಕೊಡುವ ಇವರೀಗ 'ಡೆವಿಲ್' ಸಲುವಾಗಿ ಸುದ್ದಿಯಲ್ಲಿದ್ದಾರೆ. ಜುಲೈನಲ್ಲಿ ನಟ ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಬರ್ತ್ ಡೇ ಗಿಫ್ಟ್ ಆಗಿ 'ಡೆವಿಲ್' ಸಿನಿಮಾದ ಸಣ್ಣ ಗ್ಲಿಂಪ್ಸ್ ಅನ್ನು ಅನಾವರಣಗೊಳಿಸಲಾಗಿತ್ತು. ಈ ಮೂಲಕ ವಿಶಿಷ್ಟ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಕಲ್ಯಾಣ್ ರಾಮ್ ಸಜ್ಜಾಗಿದ್ದಾರೆ. ಸಿನಿಮಾ ಕುರಿತು ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:'ಡೆವಿಲ್' ಸಿನಿಮಾದಲ್ಲಿ ಕಲ್ಯಾಣ್ ರಾಮ್ - ಜಯಂರವಿ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್