'ಲವ್ 360' ಕನ್ನಡ ಪ್ರೇಕ್ಷಕರ ಮನಗೆದ್ದ ಚಿತ್ರ. ಈ ಸಿನಿಮಾ ಮೂಲಕ ಯುವನಟ ಪ್ರವೀಣ್ ಕುಮಾರ್ ಭರವಸೆಯ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಚಿತ್ರದ ಬಳಿಕ ಪ್ರವೀಣ್ ಕುಮಾರ್ ಎಲ್ಲಿ ಹೋದ್ರು? ಅಂತಾ ಗಾಂಧಿನಗರದ ಪಂಡಿತರು ಮಾತನಾಡುವ ಹೊತ್ತಿಗೆ 'ದೇಸಾಯಿ' ಎಂಬ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾದೊಂದಿಗೆ ಬರಲು ಸಜ್ಜಾಗಿದ್ದಾರೆ. ನಿರ್ದೇಶಕ ನಾಗಿರೆಡ್ಡಿ ಭಡ ರಚನೆ ಜೊತೆಗೆ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಪ್ರವೀಣ್ ಕುಮಾರ್ ನಾಯಕನಾಗಿ ನಟಿಸುತ್ತಿರುವ 'ದೇಸಾಯಿ' ಚಿತ್ರದ ಹಾಡೊಂದರ ಚಿತ್ರೀಕರಣ ಬೆಂಗಳೂರು ನಗರದ ಹೊರವಲಯದ ಡೆಸ್ಟಿನೊ ರೆಸಾರ್ಟ್ನ ಸುಂದರ ಪರಿಸರದಲ್ಲಿ ನಡೆಯಿತು. ಗೀತೆ ರಚನೆಕಾರ ಶಿವು ಬೇರ್ಗಿ ಬರೆದಿರುವ, ಸಾಯಿಕಾರ್ತಿಕ್ ಸಂಗೀತವಿರುವ ಈ ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನಾಯಕ ಪ್ರವೀಣ್ ಕುಮಾರ್ ಹಾಗೂ ನಾಯಕಿ ರಾಧ್ಯ ಈ ಸಾಂಗ್ಗೆ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಹಾಗೂ ಚಿತ್ರದ ಬಗ್ಗೆ ಚಿತ್ರತಂಡವರು ಕೆಲ ಮಾಹಿತಿ ಹಂಚಿಕೊಂಡರು.
'ದೇಸಾಯಿ' ಒಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಎಂದು ಮಾತು ಶುರು ಮಾಡಿದ ನಿರ್ದೇಶಕ ನಾಗಿರೆಡ್ಡಿ ಭಡ, ಸುಮಾರು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿರುವ ನನಗಿದು ನಿರ್ದೇಶನದ ಮೊದಲ ಚಿತ್ರ. ತಾತ, ತಂದೆ ಹಾಗೂ ಮಗ ಮೂರು ತಲೆಮಾರಿನ ಕಥೆ ಇದರಲ್ಲಿದೆ. ಸೆಂಟಿಮೆಂಟ್ ಸನ್ನಿವೇಶಗಳು ಸಖತ್ತಾಗಿ ಮೂಡಿ ಬಂದಿವೆ. ಪ್ರೇಕ್ಷಕರು ಬಯಸುವ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಇನ್ನೊಂದು ಹಾಡು ಮುಗಿದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.
ಯುವನಟ ಪ್ರವೀಣ್ ಕುಮಾರ್ ಮಾತನಾಡಿ, ಈ ಚಿತ್ರದಲ್ಲಿ ನನ್ನದು ಆಟಗಾರ (ಅಥ್ಲೆಟಿಕ್)ನ ಪಾತ್ರ. "ಲವ್ 360" ಚಿತ್ರದ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸುತ್ತಿದ್ದೇನೆ ಎಂದು ತಿಳಿಸಿದರು. ಬಳಿಕ ನಾಯಕನಟಿ ರಾಧ್ಯ ಮಾತನಾಡಿ, ದೇಸಾಯಿ ಚಿತ್ರದಲ್ಲಿ ನನ್ನದು ಬೋಲ್ಡ್ ಹುಡುಗಿಯ ಪಾತ್ರ. ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.