ನವದೆಹಲಿ:ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW)ವು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸೋಮವಾರ ಮತ್ತೆ ಸಮನ್ಸ್ ಜಾರಿ ಮಾಡಿದೆ. ಸುಕೇಶ್ ಚಂದ್ರಶೇಖರ್ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಆಗಿರುವ ಜಾಕ್ವೆಲಿನ್‌ಗೆ ಸೆಪ್ಟೆಂಬರ್ 14ರ ರಂದು ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಲಾಗಿದೆ.
ನಟಿಯು ಕೆಲವು ಕಾರಣಗಳನ್ನು ಉಲ್ಲೇಖಿಸಿ ತಮ್ಮ ವಿಚಾರಣೆಯನ್ನು 15 ದಿನಗಳ ಕಾಲ ಮುಂದೂವಂತೆ ಕೇಳಿಕೊಂಡಿದ್ದರಿಂದ ದೆಹಲಿ ಪೊಲೀಸರು ಇಂದು (ಸೋಮವಾರ) ನಿಗದಿಯಾಗಿದ್ದ ವಿಚಾರಣೆಯನ್ನು ಮುಂದೂಡಿದ್ದಾರೆ. ಆದರೆ, ನಟಿಯ ಮನವಿಯನ್ನು ತಿರಸ್ಕರಿಸಿರುವ ದೆಹಲಿ ಪೊಲೀಸರು ಹೆಚ್ಚು ಸಮಯ ನೀಡದೇ ಬರುವ ಬುಧವಾರ (ಸೆ.14) ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದು ಮೂರನೇ ಸಮನ್ಸ್ ಆಗಿದ್ದು ತನಿಖೆಗೆ ಹಾಜರಾಗುವಂತೆ ಪೊಲೀಸರು ನಟಿ ಫರ್ನಾಂಡಿಸ್‌ಗೆ ಮತ್ತೆ ಸಮನ್ಸ್ ಜಾರಿ ಮಾಡಿದ್ದಾರೆ. ಸೆಪ್ಟಂಬರ್ 14 ರಂದು ಇಲ್ಲಿಯ ಇಒಡಬ್ಲ್ಯೂ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಹಾಜರಾಗುವಂತೆ ಅವರಿಗೆ ಹೊಸದಾಗಿ ಸಮನ್ಸ್ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ವಿಚಾರಣೆಗೆ ಹಾಜರಾಗಿರಲಿಲ್ಲ: ಇದೇ ಪ್ರಕರಣ ಸಂಬಂಧ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಆಗಸ್ಟ್ 29ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಬರಲಿಲ್ಲ. ಹೀಗಾಗಿ, ಮತ್ತೆ ಸಮನ್ಸ್ ಜಾರಿ ಮಾಡಲಾಗಿದೆ. ಕೆಲವು ಕಾರಣಗಳನ್ನು ನಟಿಯು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ.
200 ಕೋಟಿ ರೂ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ಸುಖೇಶ್ ಚಂದ್ರಶೇಖರ್ ವಿರುದ್ಧ ಆಗಸ್ಟ್ 17ರಂದು ದಿಲ್ಲಿ ಕೋರ್ಟ್‌ಗೆ ಜಾರಿ ನಿರ್ದೇಶನಾಲಯ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿತ್ತು. ಈ ಆರೋಪ ಪಟ್ಟಿಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೆಸರನ್ನು ಆರೋಪಿ ಎಂದು ನಮೂದಿಸಲಾಗಿದೆ. ಪ್ರಕರಣಗಳಲ್ಲಿ ಸುಕೇಶ್ ಭಾಗಿಯಾಗಿರುವ ಬಗ್ಗೆ ಫರ್ನಾಂಡೀಸ್ ಅವರಿಗೆ ತಿಳಿದಿತ್ತು.