ಭಾರತದ ಜನಪ್ರಿಯ ನಟ ರಜನಿಕಾಂತ್ ಮುಖ್ಯಭೂಮಿಕೆಯ ಜೈಲರ್ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ಬಾಕ್ಸ್ ಆಫೀಸ್ನಲ್ಲಿ ಆ್ಯಕ್ಷನ್ ಕಾಮಿಡಿ ಸಿನಿಮಾ ಸಖತ್ ಸದ್ದು ಮಾಡಿದೆ. ಮೂರು ವಾರಗಳು ಪೂರ್ಣಗೊಳ್ಳುವ ಮುನ್ನವೇ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 600 ಕೋಟಿ ರೂ. ಗಡಿ ದಾಟಿದೆ. ಸಿನಿಮಾಗೆ ಎಲ್ಲೆಡೆಯಿಂದ ಜೈಕಾರ ಕೇಳಿ ಬರುತ್ತಿದ್ದು, ಇದೀಗ ಹೊಸ ಸುದ್ದಿಯೊಂದು ಕೇಳಿ ಬಂದಿದೆ. ಐಪಿಎಲ್ ತಂಡ ಆರ್ಸಿಬಿ ಯ ಜೆರ್ಸಿಯನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಈ ದೃಶ್ಯವನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಚಿತ್ರತಂಡಕ್ಕೆ ಆದೇಶಿಸಿದೆ.
ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಸಿನಿಪ್ರಿಯರ ಗಮನ ಸೆಳೆದಿರುವ ಜೈಲರ್ ಸಿನಿಮಾದಲ್ಲಿ ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯನ್ನು ತೋರಿಸಲಾಗಿದೆ. ಇದೀಗ ಈ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ನ್ಯಾಯಾಲಯದ ಈ ಆದೇಶ ಚಿತ್ರಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಈ ಸೀನ್ ಕತ್ತರಿಸಲು ಜೈಲರ್ ನಿರ್ಮಾಪಕರಿಗೆ ಸೆಪ್ಟೆಂಬರ್ 1ರ ವರೆಗೆ ಸಮಯ ನೀಡಲಾಗಿದೆ.
ಏನಿದು ಪ್ರಕರಣ: 600 ಕೋಟಿ ರೂ. ಗಡಿ ದಾಟಿರುವ ಜೈಲರ್ ಸಿನಿಮಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯನ್ನು ನಕಾರಾತ್ಮಕವಾಗಿ ತೋರಿಸಲಾಗಿದೆ ಎಂಬ ಗಂಭೀರ ಆರೋಪವಿದೆ. ಈ ಕುರಿತು ಆರ್ಸಿಬಿ ತಂಡದ ಮಾಲೀಕರು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದಲ್ಲಿ ಖಳನಾಯಕ ಆರ್ಸಿಬಿ ಜೆರ್ಸಿ ಧರಿಸಿದ್ದು, ಆರ್ಸಿಬಿಯ ಇಮೇಜ್ ಹಾಳಾಗುತ್ತಿದೆ. ಈ ಸೀನ್ ಮಾಡಲು ನಮ್ಮಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.