200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲು ಪಾಲಾಗಿದ್ದಾನೆ. ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ದುಬೈ ಪ್ರವಾಸಕ್ಕೆ ಅನುಮತಿ ಕೋರಿದ್ದು, ದೆಹಲಿ ನ್ಯಾಯಾಲಯ ಇಂದು ಅನುಮತಿ ನೀಡಿದೆ. ಈವೆಂಟ್ ಒಂದರ ಸಲುವಾಗಿ ಜನವರಿ 27 ರಿಂದ 30ರವರೆಗೆ ದುಬೈಗೆ ಪ್ರಯಾಣಿಸಲು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೆಲ ದಿನಗಳ ಹಿಂದೆ ನ್ಯಾಯಾಲಯಕ್ಕೆ ಅನುಮತಿ ಕೋರಿದ್ದರು.
ಜಾರಿ ನಿರ್ದೇಶನಾಲಯದ ವಿರೋಧ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಒಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಒಪ್ಪಂದದ ಪ್ರಕಾರ ಅವರು ತಮ್ಮ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದರೆ, ಅವರ ಮೇಲೆ ಕಂಪನಿ ಮೊಕದ್ದಮೆ ಹೂಡಬಹುದು ಎಂಬ ವಿಚಾರವನ್ನು ಕೋರ್ಟ್ ಗಮನಿಸಿತು. ಅವರು ಜನವರಿ 29ರಂದು ಇತರೆ ತಾರೆಯರೊಂದಿಗೆ ದುಬೈನಲ್ಲಿ ನಡೆಯಲಿರುವ ಈವೆಂಟ್ ಒಂದರಲ್ಲಿ ಪ್ರದರ್ಶನ ನೀಡಲಿದ್ದಾರೆ. ಆದಾಗ್ಯೂ, ಜಾರಿ ನಿರ್ದೇಶನಾಲಯ (ಇಡಿ) ನಟಿಯ ಪ್ರವಾಸದ ವಿಚಾರವನ್ನು ವಿರೋಧಿಸಿದೆ. ನಟಿ ಜಾಕ್ವೆಲಿನ್ ಅವರು ಈ ಮೊದಲು ಯಾವುದೇ ಒಪ್ಪಂದದ ಬಗ್ಗೆ ತಮ್ಮ ಹೇಳಿಕೆಯಲ್ಲಿ (ಇಡಿ ವಿಚಾರಣೆ) ದಾಖಲಿಸಿಲ್ಲ ಎಂದು ಇಡಿ ಹೇಳಿದೆ.
ನಟಿ ಜಾಕ್ವೆಲಿನ್ಗೆ ರಿಲೀಫ್:ಪಟಿಯಾಲಾ ಹೌಸ್ ಕೋರ್ಟ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಅವರು ಶುಕ್ರವಾರ ನಟಿ ಜಾಕ್ವೆಲಿನ್ಗೆ ರಿಲೀಫ್ ನೀಡಿದ್ದು, ಅವರಿಗೆ ವೃತ್ತಿಪರ ಜೀವನವಿದೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆತ ನನ್ನ ಭಾವನೆಗಳೊಂದಿಗೆ ಆಟವಾಡಿ, ನನ್ನ ಜೀವನವನ್ನೇ ನರಕ ಮಾಡಿದ್ದಾನೆ: ನಟಿ ಜಾಕ್ವೆಲಿನ್ ಅಳಲು