ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಜುಲೈ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಮುಂದುವರಿಸಿದೆ. ಥಿಯೇಟರ್‌ಗಳಿಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಬಾಕ್ಸ್ ಆಫೀಸ್ ಸಕ್ಸಸ್ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಸಂಭ್ರಮ ಹಂಚಿಕೊಳ್ಳಲು ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮತ್ತು ಪ್ರಮುಖ ನಾಯಕ ನಟರಾದ ಆಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಸೇರಿದಂತೆ ಇಡೀ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ತಂಡ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೇರಿತ್ತು. ಸಿನಿಮಾದ ಪಾತ್ರವರ್ಗ ಮತ್ತು ಸಿಬ್ಬಂದಿ ಚಿತ್ರದ ಅನುಭವಗಳು ಅದರಲ್ಲೂ ವಿಶೇಷವಾಗಿ ಮರೆಯಲಾಗದ ಕೆಲ ಕ್ಷಣಗಳನ್ನು ಹಂಚಿಕೊಂಡಿತು.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಾರ್ವಜನಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸುತ್ತಿದ್ದು, ಇಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದೆ. ರಣ್ವೀರ್ ಸಿಂಗ್ ಅವರು ಪತ್ನಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಪ್ರತಿಕ್ರಿಯೆಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು. ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರ ಮತ್ತು ಒತ್ತಡಗಳನ್ನು ಹೇಗೆ ಎದುರಿಸಿದರು ಎಂಬುದರ ಬಗ್ಗೆಯೂ ಚರ್ಚಿಸಿದರು.
ತಮ್ಮ ಸಿನಿಮಾ ಸಂಬಂಧ ದೀಪಿಕಾ ಪಡುಕೋಣೆ ಅವರ ಪ್ರತಿಕ್ರಿಯೆ ಹಂಚಿಕೊಂಡ ನಾಯಕ ನಟ ರಣ್ವೀರ್ ಸಿಂಗ್, "ನಾವಿಬ್ಬರು ಒಟ್ಟಿಗೆ ಸಿನಿಮಾ ನೋಡಿದೆವು. ಅವರು ನನ್ನ ಸಿನಿಮಾವನ್ನು ಬಹಳ ಇಷ್ಟಪಟ್ಟರು. ಅದು ಗಮನಾರ್ಹ ಘಟನೆ. ಕೊನೆಯ ಸಾಲಿನ ಸೀಟ್ನಲ್ಲಿ ನಾವಿಬ್ಬರು ಮಾತ್ರ ಕುಳಿತಿದ್ದೆವು. ಅವರು ನಗುತ್ತಿದ್ದರು, ಅಳುತ್ತಿದ್ದರು ಮತ್ತು ಚಪ್ಪಾಳೆ ತಟ್ಟುತ್ತಿದ್ದರು, ನಾನು ಅತ್ಯಂತ ಅದ್ಭುತ ಅನುಭವ ಹೊಂದಿದ್ದೆ. ಅದೊಂದು ಪುರಸ್ಕಾರದ ಅನುಭವ. ಅವರು ನನ್ನ ಬಗ್ಗೆ ಹೆಮ್ಮೆಪಡುತ್ತಾರೆ" ಎಂದು ತಿಳಿಸಿದರು.