ನಟ ವಿಕ್ರಾಂತ್ ಮಾಸ್ಸೆ ಅಭಿನಯದ '12th ಫೇಲ್' ಹಿಂದಿ ಸಿನಿಮಾ ನೀರಸ ಪ್ರತಿಕ್ರಿಯೆಗಳೊಂದಿಗೆ ತನ್ನ ಪ್ರಯಾಣ ಆರಂಭಿಸಿತ್ತಾದರೂ ತೆರೆಕಂಡ ಕೆಲವೇ ದಿನಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಿತು. ವಿಧು ವಿನೋದ್ ಚೋಪ್ರಾ ನಿರ್ದೇಶನದ ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಪ್ರಿಯರು ಮಾತ್ರವಲ್ಲ, ಚಿತ್ರರಂಗದ ಖ್ಯಾತನಾಮರೂ ಕೂಡ ಈ ಸಿನಿಮಾವನ್ನು ಬಾಯ್ತುಂಬ ಹೊಗಳುತ್ತಿದ್ದಾರೆ. ಇವರ ಸಾಲಿಗೆ ಹೊಸ ಸೇರ್ಪಡೆ ದೀಪಿಕಾ ಪಡುಕೋಣೆ.
ಒಂದೊಳ್ಳೆ ಕಥೆ ಕೊಟ್ಟಿದ್ದಕ್ಕೆ ಇಡೀ ಚಿತ್ರತಂಡವನ್ನು ದೀಪಿಕಾ ಶ್ಲಾಘಿಸಿದ್ದಾರೆ. ಚಿತ್ರಲೋಕದ ಕಮಲ್ ಹಾಸನ್, ರಿಷಬ್ ಶೆಟ್ಟಿ, ಸಂಜಯ್ ದತ್, ಆಲಿಯಾ ಭಟ್, ಫರ್ಹಾನ್ ಅಖ್ತರ್, ಹೃತಿಕ್ ರೋಷನ್, ಅನುರಾಗ್ ಕಶ್ಯಪ್, ಕಂಗನಾ ರಣಾವತ್, ರೋಹಿತ್ ಶೆಟ್ಟಿ ಮತ್ತು ಅನಿಲ್ ಕಪೂರ್ ಸೇರಿದಂತೆ ಹಲವರು ಚಿತ್ರ ನೋಡಿ ಹಾಡಿ ಹೊಗಳಿದ್ದಾರೆ.
ಈ ಬಯೋಗ್ರಾಫಿಕಲ್ ಡ್ರಾಮಾ 2023ರ ಅಕ್ಟೋಬರ್ 27ರಂದು ಚಿತ್ರಮಂದಿರಗಳನ್ನು ಪ್ರವೇಶಿಸಿತ್ತು. ಸಿನಿಮಾ ಬಿಡುಗಡೆಯಾದಾಗ ಹೆಚ್ಚು ಗಮನ ಸೆಳೆಯಲಿಲ್ಲ. ಆದರೆ ಒಟಿಟಿಯಲ್ಲಿ ಲಭ್ಯವಾದ ಬಳಿಕ ಚಿತ್ರಕ್ಕೆ ವಿಶೇಷ ಪ್ರಚಾರ ಲಭಿಸಿತು. ಪ್ರಸ್ತುತ ನಂಬರ್ ಒನ್ ನಟಿ ಎಂದೇ ಜನಪ್ರಿಯರಾಗಿರುವ ದೀಪಿಕಾ ಪಡುಕೋಣೆ ಕೂಡ ಈ ಚಿತ್ರದಿಂದ ಪ್ರಭಾವಿತರಾಗಿದ್ದಾರೆ. ನಟಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಆಲಿಯಾ ಭಟ್ ಅವರ ವಿಮರ್ಶೆಯನ್ನು (ಇನ್ಸ್ಟಾ ಸ್ಟೋರಿ) ಮರು ಪೋಸ್ಟ್ ಮಾಡಿರುವ ದೀಪಿಕಾ, "ಐ ಕುಡ್ನಾಟ್ ಅಗ್ರೀ ಮೋರ್, ಕಂಗ್ರಾಜುಲೇಶನ್ಸ್ ಟು ಆಲ್'' ಎಂದು ಬರೆದಿದ್ದಾರೆ.