'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಶುಕ್ರವಾರ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರ ಭಾರತದಲ್ಲಿ 1.50 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ. ನಿನ್ನೆ ರಾತ್ರಿ ಚಿತ್ರದ ಪ್ರಮುಖ ನಟರಾದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರು ನಿರ್ದೇಶಕ ಕರಣ್ ಜೋಹರ್ ಮತ್ತು ತಂಡದ ಸದಸ್ಯರೊಂದಿಗೆ ತಮ್ಮ ಬಹು ನಿರೀಕ್ಷಿತ ಚಿತ್ರದ ಬಿಡುಗಡೆಯ ಸಂಭ್ರಮವನ್ನು ಆಚರಿಸಿದರು.
ಜುಲೈ 28 ರಂದು ಬಿಡುಗಡೆಯಾದ ಬಹುನಿರೀಕ್ಷಿತ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಸ್ವೀಕರಿಸಿದೆ. ಚಿತ್ರದ ನಿರ್ದೇಶಕ ಮತ್ತು ತಂಡ ನಿನ್ನೆ ಸಂಜೆ ಪಾರ್ಟಿಯೊಂದನ್ನು ಆಯೋಜಿಸಿದ್ದರು. ನಾಯಕ ನಟ ರಣ್ವೀರ್ ಸಿಂಗ್ ಪತ್ನಿ, ಬಾಲಿವುಡ್ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಸಹ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಸಿನಿಮಾದಲ್ಲಿನ ರಾಕಿ ಪಾತ್ರಕ್ಕಾಗಿ ಮೆಚ್ಚುಗೆ ಸ್ವೀಕರಿಸಿರುವ ನಟ ರಣ್ವೀರ್ ಸಿಂಗ್ ತಮ್ಮ ದುಬಾರಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಕರಣ್ ನಿವಾಸಕ್ಕೆ ಆಗಮಿಸಿದರು. ಈವೆಂಟ್ಗೆ ವೈಟ್ ಟಿ ಶರ್ಟ್, ಬ್ಲ್ಯಾಕ್ ಕ್ಯಾಪ್, ಫೇಸ್ ಮಾಸ್ಕ್ ಅನ್ನು ಆಯ್ದುಕೊಂಡಿದ್ದರು. ರಾಣಿ ಪಾತ್ರದಿಂದ ಪ್ರೇಕ್ಷಕರನ್ನು ಮೋಡಿ ಮಾಡಿರುವ ಆಲಿಯಾ ಭಟ್ ಸ್ವಲ್ಪ ಸಮಯದ ನಂತರ ಈ ಪಾರ್ಟಿಗೆ ಸೇರಿಕೊಂಡರು. ವೈಟ್ ಡ್ರೆಸ್, ಕನಿಷ್ಠ ಮೇಕ್ ಅಪ್ನಲ್ಲಿ ಬಹುಕಾಂತೀಯವಾಗಿ ಕಾಣಿಸಿಕೊಂಡರು.
ರಣ್ವೀರ್ ಸಿಂಗ್ ಅವರ ಪತ್ನಿ ದೀಪಿಕಾ ಪಡುಕೋಣೆ ಕೂಡ ಪ್ರತ್ಯೇಕವಾಗಿ ಈ ಪಾರ್ಟಿಗೆ ಆಗಮಿಸಿ ಸರ್ಪ್ರೈಸ್ ಕೊಟ್ಟರು. ಪಠಾಣ್ ನಟಿಯ ಎಂಟ್ರಿ ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿತು. ಗ್ರೀನ್ ಪ್ರಿಂಟೆಡ್ ಡ್ರೆಸ್, ಕನಿಷ್ಠ ಮೇಕ್ಅಪ್, ಫ್ರೀ ಹೇರ್ ಸ್ಟೈಲ್ ಮೂಲಕ ಎಂದಿನಂತೆ ಡಿಫ್ರೆಂಟ್ ಸ್ಟೈಲ್ನಲ್ಲಿ ಕಂಗೊಳಿಸಿದರು.