ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ನೀನಾಸಂ ಸತೀಶ್ ಅವರ ಮತ್ತೊಂಡು ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈ ಬಾರಿ ‘ಡಿಯರ್ ವಿಕ್ರಮ್’ ಆಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತದೆ.
ಡಿಯರ್ ವಿಕ್ರಮ್ ಸಿನಿಮಾದಲ್ಲಿ ಕ್ರಾಂತಿಕಾರಿಯೊಬ್ಬನ ಪ್ರೇಮಕತೆಯನ್ನು ಹೇಳೋದಕ್ಕೆ ಸತೀಶ್ ರೆಡಿಯಾಗಿದ್ದಾರೆ. ಕೆಲದಿನಗಳ ಹಿಂದಷ್ಟೇ ಡಿಯರ್ ವಿಕ್ರಮ್ ಚಿತ್ರದ ಟೀಸರ್ ಬಿಡುಗಡೆಯಾಗಿ ಸಿನಿರಸಿಕರ ಕುತೂಹಲ ಮೂಡಿಸಿತ್ತು. ಈಗ ಬಿಡುಗಡೆಯಾಗಿರುವ ಟ್ರೇಲರ್ ಆ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಬಿಗಿಯಾದ ಚಿತ್ರಕತೆ ಹಾಗೂ ಮನಮುಟ್ಟುವ ಅಭಿನಯದಿಂದಾಗಿ ಈ ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದು ಟ್ರೇಲರ್ ನೋಡಿ ಹೇಳಬಹುದಾಗಿದೆ.
ತಮ್ಮ ಹೊಸ ಸಿನಿಮಾದ ಬಗ್ಗೆ ಉತ್ಸುಕರಾಗಿ ಮಾತಾಡಿದ ನಟ ಸತೀಶ್, ‘ಶ್ರದ್ಧಾ ಶ್ರೀನಾಥ್ ಅವರೊಂದಿಗೆ ಇದು ನನ್ನ ಮೊದಲ ಸಿನಿಮಾ. ವಸಿಷ್ಟ ಸಿಂಹ, ಸೋನು ಗೌಡ, ಅಚ್ಯುತ್ ಕುಮಾರ್ ಮುಂತಾದ ಹಲವು ಹೆಸರಾಂತ ನಟ-ನಟಿಯರು ಚಿತ್ರಕ್ಕೆ ತಮ್ಮ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ’ ಎಂದರು.