ಬೆಂಗಳೂರು: ಕರ್ನಾಟಕ ಚಲನಚಿತ್ರ ಕಪ್ ನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯವನ್ನು ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೀಕ್ಷಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಾಷ್ಟ್ರಕೂಟ ಫ್ಯಾಂಥರ್ಸ್ ಹಾಗೂ ಗಂಗಾ ವಾರಿಯರ್ಸ್ ನಡುವಿನ ಪಂದ್ಯವನ್ನು ಅವರು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ''ನಮ್ಮ ಚಂದನವನದ ನಟರು, ಕ್ರಿಕೆಟ್ ಆಟಗಾರರು, ಪತ್ರಕರ್ತರು ಸೇರಿ ಒಟ್ಟಿಗೆ ಕ್ರಿಕೆಟ್ ಪಂದ್ಯ ಆಡುವ ಮೂಲಕ ದೇಶದಲ್ಲೇ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದ್ದು, ನಾನು ಎಲ್ಲಾ ಆಟಗಾರರು, ಕಲಾವಿದರಿಗೆ ಈ ಸಂದರ್ಭದಲ್ಲಿ ಶುಭ ಕೋರುತ್ತೇನೆ'' ಎಂದರು.
"ಅಭಿಮಾನಿಗಳ ಜೊತೆ ಸೇರಿ ಈ ಕೆಸಿಸಿ ಕಪ್ ಪಂದ್ಯಾವಳಿಯನ್ನು ಬಹಳ ಸಂತೋಷದಿಂದ ನಾನು ವೀಕ್ಷಣೆ ಮಾಡಿದ್ದೇನೆ. ಇಂತಹ ಪ್ರಯತ್ನಕ್ಕೆ ನಮ್ಮ ಸರ್ಕಾರ ಸದಾ ನಿಮ್ಮ ಜೊತೆ ಇರುತ್ತದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಕನ್ನಡ ಚಿತ್ರರಂಗ ದೇಶಕ್ಕೆ ಮಾದರಿಯಾಗುತ್ತಿದೆ. ಎಲ್ಲರಿಗೂ ಈ ಸಂದರ್ಭದಲ್ಲಿ ಶುಭಕೋರುತ್ತೇನೆ'' ಎಂದು ಹೇಳಿದರು.