ಶ್ರೀಕಾಂತ್ ಒಡೆಲಾ ನಿರ್ದೇಶನದ 'ದಸರಾ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ತೆಲುಗು ಸ್ಟಾರ್ ನಾನಿ ಅಭಿನಯಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಬಹಳ ಉತ್ತಮವಾಗಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ವಿಶ್ವಾದ್ಯಂತ 100 ಕೋಟಿ ರೂ. ಸಂಗ್ರಹಿಸಿದೆ. ಇದೀಗ ಭಾರತದಲ್ಲಿ 70 ಕೋಟಿ ರೂ.ಗಳ ಗುರಿ ಹೊಂದಿದ್ದು, ಇಂದು 70 ಕೋಟಿ ತಲುಪುವ ನಿರೀಕ್ಷೆಯಿದೆ. ಆದರೆ ಕಳೆದ ಎರಡು ದಿನಗಳಿಂದ ಕಲೆಕ್ಷನ್ ಸಂಖ್ಯೆ ಕಡಿಮೆಯಾಗಿದೆ ಎಂದು ಸಿನಿಮಾ ವ್ಯಾಪಾರ ವರದಿಗಳು ಸೂಚಿಸಿವೆ. ವಾರಾಂತ್ಯದಲ್ಲಿ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ.
100 ಕೋಟಿ ಕ್ಲಬ್ ಸೇರಿದ ಸಿನಿಮಾ: ನ್ಯಾಚುರಲ್ ಸ್ಟಾರ್ ನಾನಿ ಮುಖ್ಯಭೂಮಿಕೆಯ ಮೊದಲ ಪ್ಯಾನ್ ಇಂಡಿಯಾ ಚಿತ್ರ 'ದಸರಾ' ಮಾರ್ಚ್ 30ರಂದು ಐದು ಭಾಷೆಗಳಲ್ಲಿ ತೆರೆ ಕಂಡಿದೆ. ಚಿತ್ರ ನಿರೀಕ್ಷೆಯಂತೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ. ಥಿಯೇಟರ್ನಲ್ಲಿ ಈ ಸಿನಿಮಾ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ. ಕೇವಲ ಆರು ದಿನಗಳಲ್ಲಿ ಚಿತ್ರ ವಿಶ್ವಾದ್ಯಂತ 100 ಕೋಟಿ ರೂ. ಗಳಿಸಿತು. ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿದೆ.
ಶ್ರೀಕಾಂತ್ ಒಡೆಲಾ ಚೊಚ್ಚಲ ಚಿತ್ರವಿದು: ಬಿಡುಗಡೆ ಆದ ಎರಡು ದಿನಗಳಲ್ಲಿ 50 ಕೋಟಿ ರೂ.ಗೂ ಅಧಿಕ ಸಂಗ್ರಹ ಮಾಡಿದ್ದ ಈ ದಸರಾ ಸಿನಿಮಾ 6 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ. ಚಿತ್ರ ಸೂಪರ್ ಹಿಟ್ ಆಗಿದ್ದಲ್ಲದೇ, ಕಲೆಕ್ಷನ್ ವಿಚಾರದಲ್ಲೂ ಓಟ ಮುಂದುವರಿಸಿದೆ. ನಾನಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ. ಕೀರ್ತಿ ಸುರೇಶ್ ನಾಯಕ ನಟಿಯಾಗಿ ಗಮನ ಸೆಳೆದಿದ್ದಾರೆ. ಕಥೆಯನ್ನು ತೆರೆ ಮೇಲೆ ರವಾನಿಸಿರುವ ರೀತಿಗೆ ಶ್ರೀಕಾಂತ್ ಒಡೆಲಾ ಮೆಚ್ಚುಗೆ ಸಂಪಾದಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ ಕೂಡ ಹೌದು. ಮೊದಲ ಸಿನಿಮಾದಲ್ಲೇ ಯಶಸ್ವಿ ಆಗಿದ್ದು, ಮುಂದಿನ ದಿನಗಳಲ್ಲಿ ಸ್ಟಾರ್ ಡೈರೆಕ್ಟರ್ ಆಗುವ ಸೂಚನೆ ಕೊಟ್ಟಿದ್ದಾರೆ.