ಎಲ್ಲೆಡೆ ಇಂದು ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಭಾರತೀಯರೂ ಕೂಡ ಅದ್ಧೂರಿಯಾಗಿ ನವ ವರುಷವನ್ನು ಬರಮಾಡಿಕೊಂಡಿದ್ದಾರೆ. ವರ್ಷದ ಮೊದಲ ದಿನದಂದು ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಶುಭ ಕೋರಿ, ಶುಭ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ತಮ್ಮದೇ ಅಭಿನಯದ ಬಹುನಿರೀಕ್ಷಿತ ಕ್ರಾಂತಿ ಸಿನಿಮಾ ಟ್ರೈಲರ್ ಇದೇ ಜನವರಿ 7ರಂದು ಬಿಡುಗಡೆ ಆಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳಲ್ಲಿ ನಿರೀಕ್ಷೆಯೂ ಹೆಚ್ಚಾಗಿದೆ.
55ನೇ ಸಿನಿಮಾ: ಕ್ರಾಂತಿ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಇದು ದರ್ಶನ್ ಅಭಿನಯದ 55ನೇ ಚಿತ್ರ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ದರ್ಶನ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಸ್ಕೆಟ್ ಬಾಲ್ ಹಿಡಿದು ನಡೆದುಕೊಂಡು ಬರುತ್ತಿರುವ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಹೊಸ ವರ್ಷಕ್ಕೆ ದರ್ಶನ್ ಶುಭಾಶಯ:ಹೊಸ ವರ್ಷದ ಪ್ರತಿ ಕ್ಷಣವೂ ಸಂತಸದಿಂದ ಕೂಡಿರಲಿ. ಇನ್ನೂ ಹೆಚ್ಚು ಆತ್ಮವಿಶ್ವಾಸದೊಂದಿಗೆ ನಿಮ್ಮ ಕನಸುಗಳೆಲ್ಲಾ ಈಡೇರಲಿ. ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
ಕ್ರಾಂತಿ ಚಿತ್ರತಂಡ:ನಟ ದರ್ಶನ್ ಅವರ 'ಯಜಮಾನ' ಸಿನಿಮಾ ನಿರ್ಮಿಸಿದ್ದ ಶೈಲಜಾ ನಾಗ್, ಬಿ ಸುರೇಶ್ ಅವರೇ ಕ್ರಾಂತಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸಂಗೀತ ನಿರ್ದೇಶಕ ಹರಿಕೃಷ್ಣ ಚಿತ್ರ ನಿರ್ದೇಶನ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಕೊನೆಯದಾಗಿ ರಾಬರ್ಟ್ ಸಿನಿಮಾ ಮೂಲಕ ದರ್ಶನ್ ಅಭಿಮಾನಿಗಳಿಗೆ ಮನೋರಂಜನೆ ನೀಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಯಜಮಾನ ಚಿತ್ರತಂಡ ಮತ್ತೆ ದರ್ಶನ್‌ರೊಂದಿಗೆ ಕ್ರಾಂತಿ ಸಿನಿಮಾ ಮಾಡಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.
ಇದನ್ನೂ ಓದಿ:ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿದ ಕರಾವಳಿಯ ಪ್ರತಿಭೆ ರೂಪೇಶ್ ಶೆಟ್ಟಿ
ಅಭಿಮಾನಿಗಳಿಗೆ ಧನ್ಯವಾದ: ಈಗಾಗಲೇ ಚಿತ್ರದ ಕೆಲ ಹಾಡುಗಳು ಬಿಡುಗಡೆಯಾಗಿ ಉತ್ತಮ ವೀಕ್ಷಣೆ ಕಂಡಿದೆ. 'ಹಾಡುಗಳು ಎಲ್ಲಾ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೆಂಡಿಂಗ್ ಆಗಿವೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ' ಎಂದು ದರ್ಶನ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಜನವರಿ 26ರಂದು ಬಿಡುಗಡೆ ಆಗಲಿರುವ ಕ್ರಾಂತಿ ಸಿನಿಮಾದಲ್ಲಿ ದರ್ಶನ್ಗೆ ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಅಂದರೆ ಶೇ. 90ರಷ್ಟು ಕಲಾವಿದರು ಇದ್ದಾರೆ.
ಇದನ್ನೂ ಓದಿ:ಕ್ರಾಂತಿ ಸಿನಿಮಾಗೆ ಭರ್ಜರಿ ಸ್ವಾಗತ ಕೋರಿದ ದರ್ಶನ್ ಅಭಿಮಾನಿಗಳು