ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಶುಗರ್ ಫ್ಯಾಕ್ಟರಿ'. ಶೀರ್ಷಿಕೆ ಮತ್ತು ಹಾಡುಗಳಿಂದಲೇ ಚಿತ್ರ ಸುದ್ದಿಯಾಗುತ್ತಿದೆ. 'ಕೌಸಲ್ಯ ಸುಪ್ರಜಾ ರಾಮ' ಸೂಪರ್ ಹಿಟ್ ಬಳಿಕ ಡಾರ್ಲಿಂಗ್ ಕೃಷ್ಣ ನಟಿಸುತ್ತಿರುವ ಸಿನಿಮಾವಿದು. ದೀಪಕ್ ಅರಸ್ ನಿರ್ದೇಶನದ ಈ ಚಿತ್ರಕ್ಕೆ ಲವ್ಲೀ ಸ್ಟಾರ್ ಪ್ರೇಮ್ ಮತ್ತು ನಿಖಿಲ್ ಕುಮಾರಸ್ವಾಮಿ ಬೆಂಬಲ ಸಿಕ್ಕಿದೆ. ಚಿತ್ರದ ಟ್ರೇಲರ್ ಅನ್ನು ನಿಖಿಲ್ ಬಿಡುಗಡೆಗೊಳಿಸಿ ಮೆಚ್ಚಿಕೊಂಡರು. ಸದ್ಯ ಆನಂದ್ ಆಡಿಯೋ ಮೂಲಕ ಅನಾವರಣಗೊಂಡ ಟ್ರೇಲರ್‌ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ನಿರ್ದೇಶಕ ದೀಪಕ್ ಅರಸ್ ಮಾತನಾಡಿ, "ಶುಗರ್ ಫ್ಯಾಕ್ಟರಿ' ಎಂದರೆ ಒಂದು ಪಬ್ನ ಹೆಸರು. ಚಿತ್ರದಲ್ಲಿ ಪಬ್ ಕೂಡ ಒಂದು ಪಾತ್ರ. ಹಾಗಾಗಿ ನಮ್ಮ ಸಿನಿಮಾಗೆ 'ಶುಗರ್ ಫ್ಯಾಕ್ಟರಿ' ಎಂದು ಹೆಸರಿಟ್ಟಿದ್ದೇವೆ. ಹಾಗಂತ ನಮ್ಮ ಚಿತ್ರದಲ್ಲಿ ಬರೀ ಹಾಡು, ಕುಣಿತ, ಕುಡಿತ ಅಷ್ಟೇ ಅಲ್ಲ. ಇದೊಂದು ಸುಮಧುರ ಪ್ರೇಮ ಕಾವ್ಯ. ಆ್ಯಕ್ಷನ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಒಟ್ಟಿನಲ್ಲಿ ಈಗಿನ ಜನತೆ ಯಾವ ಮನರಂಜನೆ ಬಯಸುತ್ತಾರೋ, ಅದೆಲ್ಲವೂ ಚಿತ್ರದಲ್ಲಿದೆ" ಎಂದರು.
ಬಳಿಕ ಡಾರ್ಲಿಂಗ್ ಕೃಷ್ಣ ಮಾತನಾಡುತ್ತಾ, "ಲವ್ ಮಾಕ್ಟೇಲ್' ಚಿತ್ರದ ನಂತರ ಕೇಳಿದ ಕಥೆ ಇದು. ನಾನು ಲವ್ ಮಾಕ್ಟೇಲ್ ಚಿತ್ರದ ಆಡಿಷನ್ನಲ್ಲಿ ಯುವ ಜನತೆ ಈಗ ಯಾವ ರೀತಿ ಕಥೆ ಇಷ್ಟಪಡುತ್ತಾರೆ ಎಂದು ಕೇಳುತ್ತಿದೆ. ಅದೇ ತರಹದ ಕಥೆಯನ್ನು ದೀಪಕ್ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಬಂದಿದೆ" ಎಂದು ಹೇಳಿದರು.