ಲವ್ ಮಾಕ್ಟೈಲ್ ಸಕ್ಸಸ್ ಜೋಡಿ ಎಂದೇ ಕರೆಸಿಕೊಳ್ಳುತ್ತಿರುವ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿರುವ ಚಿತ್ರ ಲವ್ ಬರ್ಡ್ಸ್. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಈ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಕೊನೇಯ ಚಿತ್ರವಾಗಿರೋ ಲವ್ ಬರ್ಡ್ಸ್ ಚಿತ್ರದ ಟೀಸರನ್ನು ನಟ ವಿಜಯ ರಾಘವೇಂದ್ರ ಹಾಗೂ ಅಜಯ್ ರಾವ್ ಬಿಡುಗಡೆ ಮಾಡುವ ಮೂಲಕ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.
ನಿರ್ದೇಶಕ ಪಿ ಸಿ ಶೇಖರ್ ಆ್ಯಕ್ಷನ್ ಕಟ್ ಹೇಳಿರುವ ಲವ್ ಬರ್ಡ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಾಯಕ, ನಾಯಕಿಯ ಪಾತ್ರವನ್ನು ಪರಿಚಯಿಸುವ ಈ ಟೀಸರ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ದೇಶಕ ಪಿ.ಸಿ ಶೇಖರ್ ಮಾತನಾಡಿ, ನಾನು ಸಾಮಾನ್ಯವಾಗಿ ಒಂದೇ ತರಹದ ಚಿತ್ರ ಮಾಡುವುದಿಲ್ಲ. ಬೇರೆ ಬೇರೆ ರೀತಿಯ ಚಿತ್ರ ಮಾಡುತ್ತಿರುತ್ತೇನೆ. ಲಾಕ್ ಡೌನ್ ಸಮಯದಲ್ಲಿ ಬರೆದ ಕಥೆ ಇದು. ಮದುವೆಯಾದ ನನ್ನ ಸ್ನೇಹಿತರು ಹಂಚಿಕೊಳ್ಳುತ್ತಿದ್ದ ಕೆಲವು ವಿಷಯಗಳು ಈ ಕಥೆ ಬರೆಯಲು ನನಗೆ ಸ್ಪೂರ್ತಿ.
ಕಥೆ ಬರೆಯಬೇಕಾದರೆ ಕೃಷ್ಣ - ಮಿಲನ ನಾಗರಾಜ್ ಅವರೇ ನಾಯಕ ಹಾಗೂ ನಾಯಕಿ ಎಂದು ನಿರ್ಧಾರ ಮಾಡಿದ್ದೆ. ಆನಂತರ ನಿರ್ಮಾಪಕ ಚಂದ್ರು ಅವರಿಗೆ ಕಥೆ ಹೇಳಿದೆ. ಅವರು ಚಿತ್ರ ಮಾಡಲು ಮುಂದಾದರು. ಚಿತ್ರತಂಡದ ಸಹಕಾರದಿಂದ ಲವ್ ಬರ್ಡ್ಸ್ ಚೆನ್ನಾಗಿ ಮೂಡಿ ಬಂದಿದೆ.
ನಂತರ ಡಾರ್ಲಿಂಗ್ ಕೃಷ್ಣ ಮಾತನಾಡಿ, ನಾನು ಹಾಗೂ ಮಿಲನ ನಾಗರಾಜ್ ಲವ್ ಮಾಕ್ಟೈಲ್ ಚಿತ್ರದ ನಂತರ ಮಾಡಿರುವ ಚಿತ್ರವಿದು. ಅದರಲ್ಲಿ ಆದಿ ಹಾಗೂ ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆವು. ಇದರಲ್ಲಿ ದೀಪಕ್ ಹಾಗೂ ಪೂಜಾ ಪಾತ್ರದಲ್ಲಿ ಅಭಿನಯಿಸಿದ್ದೇವೆ. ಚಿತ್ರದಲ್ಲಿ ಆ್ಯಕ್ಷನ್ ಸನ್ನಿವೇಶಗಳು ಚೆನ್ನಾಗಿದೆ. ನಿರ್ದೇಶಕ ಪಿ.ಸಿ. ಶೇಖರ್ ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ. ನಿರ್ಮಾಪಕ ಚಂದ್ರು ಅವರಿಗೆ ಧನ್ಯವಾದಗಳು ಎಂದು ಹೇಳಿದರು.