ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕೂಡ ಒಂದು. ಈಗಾಗಲೇ ಸೀಸನ್ 5 ರಲ್ಲಿ 10 ಸಾಧಕರು ಬಂದಿದ್ದು, 11ನೆಯ ಅತಿಥಿಯಾಗಿ ನೃತ್ಯ ಸಾಧಕ ಚಿನ್ನಿ ಪ್ರಕಾಶ್ ಆಗಮಿಸಿದ್ದಾರೆ. ಆಕರ್ಷಕವಾಗಿರುವ ಕೆಂಪು ಸೀಟ್ನಲ್ಲಿ ಕುಳಿತು ಬಾಲ್ಯ, ಶಿಕ್ಷಣ, ಉದ್ಯೋಗ, ಸಿನಿಮಾ, ಕುಟುಂಬ, ಸ್ನೇಹಿತರು ಹೀಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ಸಾಧನೆಗೈದ ಇವರು ತಮ್ಮ ಜೀವನದ ಕಥೆಯನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.
ಡ್ಯಾನ್ಸ್ ಮಾಸ್ಟರ್ ಆದದ್ದು ಹೇಗೆ?:ಭಾರತದ ಸ್ಟೈಲಿಶ್ ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಪರಿಚಯ ಸಾಮಾನ್ಯವಾಗಿ ಬಹುತೇಕರಿಗಿದೆ. ನೃತ್ಯ ಲೋಕದ ಸ್ಟಾರ್ ತಮ್ಮ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರು ವೇದಿಕೆಯಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಂಡರು. ಅವರು ನಾನು ಇಲ್ಲದೇ ಸಾಂಗ್ಗಳನ್ನೇ ಮಾಡ್ತಾ ಇರಲಿಲ್ಲ ಎಂದು ಹೇಳಿದರು.
"ನನ್ನ ತಂದೆಗೆ ನನ್ನನ್ನು ಹೀರೋ ಆಗಿ ನೋಡಬೇಕೆಂಬ ಆಸೆ ಇತ್ತು. ಆ ಕಾರಣಕ್ಕಾಗಿಯೇ ನಾನು ರಹಸ್ಯ ರಾತ್ರಿ ಎಂಬ ಸಿನಿಮಾ ಮಾಡಿದ್ದೆ. ಆದರೆ ಅದು ಸಕ್ಸಸ್ ಕಾಣದೇ ಕೈಯಲ್ಲಿರುವ ದುಡ್ಡೆಲ್ಲ ಖಾಲಿಯಾಯಿತು. ಮುಂದೆ ಬೇರೇನೂ ಮಾಡಲು ತೋಚದೇ ಡ್ಯಾನ್ಸ್ ಕೊರಿಯೋಗ್ರಾಫರ್ ಆದೆ. 1981ರಲ್ಲಿ ಮೊದಲ ಬಾರಿಗೆ ಮಿಸ್ಟರ್ ವಿಜಯ್ ಎಂಬ ಸಿನಿಮಾಗೆ ಕೊರಿಯೋಗ್ರಾಫರ್ ಆಗಿ ಸೇರಿಕೊಂಡೆ."
"ಆದರೆ, ಆ ಸಿನಿಮಾವೂ ನನ್ನ ಕೈ ಹಿಡಿಯಲಿಲ್ಲ. ಚಿತ್ರದ ಶೂಟಿಂಗ್ ಊಟಿಯಲ್ಲಿ ನಡೆಯುತ್ತಿರಬೇಕಾದ್ರೆ ಪರ್ವತದ ಮೇಲಿಂದ ನನಗೊಂದು ಶಾಟ್ ಬೇಕಿತ್ತು. ಅದಕ್ಕೆ ನಟಿಯನ್ನು ಸ್ಟೂಲ್ ಮೇಲೆ ನಿಂತು ಹಾರಲು ಹೇಳಿದೆ. ಅವರು ಹಾರುತ್ತಿದ್ದಂತೆ ಕೆಳಗೆ ಬಿದ್ದು, ಕಾಲು ಮುರಿದುಕೊಂಡರು. ಅಲ್ಲಿಗೆ ನನಗೆ ಸಿಕ್ಕಿದ ಅವಕಾಶವನ್ನೂ ಕಳೆದುಕೊಂಡೆ."