ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ನಂ 1 ಸ್ಥಾನದಲ್ಲಿದೆ. ವಾರದ ಐದು ದಿನ ಧಾರಾವಾಹಿ ಮನರಂಜನೆಯಾದರೆ ಉಳಿದೆರಡು ದಿನ ರಿಯಾಲಿಟಿ ಶೋಗಳು ಜನರ ಮನ ಗೆಲ್ಲುತ್ತವೆ. ಈಗಾಗಲೇ ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಸತ್ಯ, ಭೂಮಿಗೆ ಬಂದ ಭಗವಂತ, ಜೊತೆ ಜೊತೆಯಲಿ ಧಾರಾವಾಹಿ ಸೂಪರ್ ಹಿಟ್ ಆಗಿವೆ.
ವೀಕೆಂಡ್ ದಿನಗಳಲ್ಲಿ ಇಷ್ಟು ದಿನ ಸರಿಗಮಪ ಲಿಟಲ್ ಚಾಂಪ್ಸ್ ಮತ್ತು ಸೂಪರ್ ಕ್ವೀನ್ ರಿಯಾಲಿಟಿ ಶೋ ಮನರಂಜನೆ ನೀಡುತ್ತಿದ್ದವು. ಈ ಎರಡು ಕಾರ್ಯಕ್ರಮಗಳು ಎರಡು ವಾರದ ಹಿಂದೆಯಷ್ಟೇ ಮುಕ್ತಾಯಗೊಂಡಿದೆ. ಬಳಿಕ ಕನ್ನಡದ ಜನಪ್ರಿಯ ನಟ ರಮೇಶ್ ಅರವಿಂದ್ ನಡೆಸಿಕೊಡುವ ವೀಕೆಂಡ್ ವಿತ್ ರಮೇಶ್ ಸೀಸನ್ 5 ಪ್ರಾರಂಭಗೊಂಡಿದೆ. ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಕರೆತಂದು ಕೆಂಪು ಕುರ್ಚಿಯಲ್ಲಿ ಕೂರಿಸಿ ಅವರ ಜೀವನಗಾಥೆಯನ್ನು ಜನತೆಗೆ ತಲುಪಿಸುವ ಕೆಲಸ ಆಗುತ್ತಿದೆ.
ಈಗಾಗಲೇ 9 ಸಾಧಕರ ಕಥೆ ಈ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ. ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ (ನಟಿ) ಪ್ರಭುದೇವ (ನಟ, ನೃತ್ಯ ನಿರ್ದೇಶಕ). ಡಾ. ಸಿ.ಎನ್ ಮಂಜುನಾಥ್ (ಜಯದೇವ ಸಂಸ್ಥೆಯ ನಿರ್ದೇಶಕ), ದತ್ತಣ್ಣ (ಹಿರಿಯ ಕಲಾವಿದ), ಡಾಲಿ ಧನಂಜಯ್ (ಬಹುಬೇಡಿಕೆ ನಟ), ಅವಿನಾಶ್ (ಹಿರಿಯ ನಟ), ಮಂಡ್ಯ ರಮೇಶ್ (ಹಿರಿಯ ನಟ), ಸಿಹಿಕಹಿ ಚಂದ್ರು (ನಟ, ನಿರೂಪಕ), ಡಾ. ಗುರುರಾಜ ಕರಜಗಿ (ಶಿಕ್ಷಣ ತಜ್ಞ) ಆಗಮಿಸಿದ್ದರು. ಈ ವಾರ ನೆನಪಿರಲಿ ಪ್ರೇಮ್ (ನಟ) ಸಾಧಕರ ಕುರ್ಚಿಯನ್ನು ಅಲಂಕರಿಸಲಿದ್ದಾರೆ.
ಇದನ್ನೂ ಓದಿ:ರಂಗೇರಿದ ಚುನಾವಣಾ ಕಣ: ಮಂಕಾದ ಕನ್ನಡ ಚಿತ್ರರಂಗ, ತೆರೆಕಾಣದ ಸಿನಿಮಾಗಳು
ಇದು ಮಾತ್ರವಲ್ಲದೇ ಜನರಿಗೆ ಇನ್ನಷ್ಟು ಮನರಂಜನೆ ನೀಡಲು ಜೀ ಕನ್ನಡ ವಾಹಿನಿ ವಾರಾಂತ್ಯದಲ್ಲಿ ಮತ್ತೆರಡು ರಿಯಾಲಿಟಿ ಶೋಗಳನ್ನು ನಾಳೆಯಿಂದ ಪ್ರಾರಂಭಿಸುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಮತ್ತು ಛೋಟಾ ಚಾಂಪಿಯನ್ ಕಾರ್ಯಕ್ರಮ ಮೇ 6 ರಿಂದ ಶುರುವಾಗಲಿದೆ. ಈ ರಿಯಾಲಿಟಿ ಶೋಗಾಗಿ ಕಾಯುತ್ತಿದ್ದ ಜನರು ಫುಲ್ ಖುಷಿಯಲ್ಲಿದ್ದಾರೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7:ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಈಗಾಗಲೇ ಕನ್ನಡಿಗರ ಮನ ಗೆದ್ದಿದೆ. 6 ಸೀಸನ್ಗಳನ್ನು ಪೂರೈಸಿರುವ ಫೇಮಸ್ ರಿಯಾಲಿಟಿ ಶೋ ಇದೀಗ ಮತ್ತೆ ನಿಮ್ಮನ್ನು ಕುಣಿಸಲು ಬರುತ್ತಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30 ರಿಂದ ಶೋ ಪ್ರಸಾರವಾಗಲಿದೆ. ಕಾರ್ಯಕ್ರಮದ ತೀರ್ಪುಗಾರರಾಗಿ ಕರುನಾಡ ಚಕ್ರವರ್ತಿ ಡಾ.ಶಿವ ರಾಜ್ಕುಮಾರ್, ಡ್ಯಾನ್ಸ್ ಮಾಸ್ಟರ್ ಚಿನ್ನಿ ಪ್ರಕಾಶ್, ಕ್ರೇಜಿ ಕ್ವೀನ್ ರಕ್ಷಿತಾ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದ್ದಾರೆ. ನಿರೂಪಣೆಯನ್ನು ಅನುಶ್ರೀ ಮಾಡಲಿದ್ದಾರೆ.
ಛೋಟಾ ಚಾಂಪಿಯನ್:ಪುಣಾಣಿಗಳ ಲೋಕ ಛೋಟಾ ಚಾಂಪಿಯನ್ ಕೂಡ ನಾಳೆಯಿಂದ ನಿಮ್ಮನ್ನು ರಂಜಿಸಲಿದೆ. 6 ವರ್ಷದೊಳಗಿನ ಪುಟಾಣಿ ಮಕ್ಕಳು ಈ ಕಾರ್ಯಕ್ರಮದ ಮೂಲಕ ಪ್ರೇಕ್ಷಕರಿಗೆ ಕಚಗುಳಿ ನೀಡಲಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ 6 ರಿಂದ 7.30 ರ ತನಕ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಶೋನ ತೀರ್ಪುಗಾರರಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಇರಲಿದ್ದಾರೆ. ನಿರೂಪಣೆಯನ್ನು ಕುರಿ ಪ್ರತಾಪ್ ಮತ್ತು ಶ್ವೇತಾ ಚೆಂಗಪ್ಪ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ಬಿಡುಗಡೆ ತಡೆಗೆ ಕೇರಳ ಹೈಕೋರ್ಟ್ ನಕಾರ