'ಕಾಂತಾರ ಭಾಗ 2 ಮಾಡಬೇಡಿ. ನಮ್ಮ ದೈವವನ್ನು ನಿಮ್ಮ ಮನರಂಜನೆಗೆ ಬಳಸಿಕೊಳ್ಳಬೇಡಿ..' ಇದು ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡಿನ ಜನರ ಮನವಿ. ಅರೇ, ದಿಢೀರ್ ಇಂಥ ಬೆಳವಣಿಗೆಗೆ ಏನು ಕಾರಣ?. ತುಳುನಾಡಿದ ಜನರ ಆರಾಧ್ಯ ದೈವಗಳಲ್ಲೊಂದಾಗಿರುವ ಪಂಜರ್ಲಿಯ ವೇಷಧಾರಣೆ ಮಾಡಿ ಅಪಹಾಸ್ಯ ಮಾಡುತ್ತಿರುವ ಘಟನೆಗಳೇ ಇದಕ್ಕೆ ಕಾರಣವಾಗಿದೆ.
ಅಪಾರ ಜನಮನ್ನಣೆ ಗಳಿಸಿದ ಕನ್ನಡದ ಸೂಪರ್ ಹಿಟ್ ಸಿನಿಮಾ ಕಾಂತಾರ. ಇದು ಕೇವಲ ಸಿನಿಮಾ ಮಾತ್ರವಲ್ಲ, ಭಕ್ತಿ, ಶಕ್ತಿಯೆಂದೇ ಪರಿಗಣಿಸಲ್ಪಟ್ಟಿದೆ. ಜೊತೆಗೆ ಅದೊಂದು ಸಂಸ್ಕೃತಿಯ ಪ್ರತಿಬಿಂಬವೂ ಹೌದು. ಕಾಂತಾರ ಕಥೆಯೊಂದಿಗೆ ತುಳುನಾಡಿನ ಜನರಿಗೆ ಭಾವನಾತ್ಮಕ ಸಂಬಂಧವಿದೆ. ಆದರೆ ಕರಾವಳಿ ಜಿಲ್ಲೆಯ ಆಚಾರ-ವಿಚಾರಗಳ ಬಗ್ಗೆ ಹೆಚ್ಚೇನೂ ಅರಿಯದ ಕೆಲವು ಜನರು ದೈವಗಳ ವೇಷಭೂಷಣವನ್ನು ಕೀಳು ಮಟ್ಟದ ತಮಾಷೆಗೆ, ಅಪಹಾಸ್ಯಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಹೀಗಾಗಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಕಾಂತಾರದ ಮತ್ತೊಂದು ಭಾಗ ಮಾಡಬೇಡಿ ಎಂಬ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸುತ್ತಿದ್ದಾರೆ.
ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ್ದ ಕಾಂತಾರ ಹಿಂದೂ ಸಂಸ್ಕೃತಿಯನ್ನು ಅದರಲ್ಲೂ ತುಳುನಾಡ ಪರಂಪರೆಯನ್ನು ಎತ್ತಿ ಹಿಡಿದಿದೆ. ಸಿನಿಮಾದ ಕೊನೆಯಲ್ಲಿ ರಿಷಬ್ ಶೆಟ್ಟಿ ಅವರು ಪಂಜುರ್ಲಿ ದೈವವೇ ಆವಾಹನೆಯಾದಂತೆ ನಟಿಸಿದ್ದರು. ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರಲ್ಲಿ ವಿಶೇಷ ರೀತಿಯಲ್ಲಿ ಪ್ರಭಾವ ಬೀರಿದ್ದರು. ಈ ಮೂಲಕ ನಟನಿಗೆ ಡಿವೈನ್ ಸ್ಟಾರ್ ಎಂಬ ಖ್ಯಾತಿಯೂ ಬಂದಿತ್ತು.
ಆದ್ರೆ ಆ ನಂತರದಲ್ಲಿ ಕೆಲವರಿಂದ ಹುಚ್ಚಾಟ ಆರಂಭವಾಗಿದೆ. ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ ವೇಷ ಧರಿಸಿ ಅನೇಕರು ಪ್ರತ್ಯಕ್ಷರಾದರು. ಈ ಕುರಿತು ಮನಬಂದಂತೆ ರೀಲ್ಸ್ ಮಾಡಿದ್ದಾರೆ. ಇದು ಭಾವನೆಗಳಿಗೆ ಧಕ್ಕೆ ತರುವ ಕೆಲಸ ಎಂದು ತುಳುನಾಡಿನ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.