ಭಾರತೀಯ ಚಿತ್ರರಂಗದ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಿತ್ರರಂಗದಲ್ಲಿ ಜೀವಮಾನ ಶ್ರೇಷ್ಠ ಸಾಧನೆಗೆ ಈ ಗೌರವ ನೀಡಲಾಗುತ್ತದೆ.
ಅನುರಾಗ್ ಸಿಂಗ್ ಠಾಕೂರ್ ಟ್ವೀಟ್:ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ Xನಲ್ಲಿ ಇಂದು ಈ ವಿಷಯ ಹಂಚಿಕೊಂಡಿದ್ದಾರೆ. ಟ್ವೀಟ್ ಮಾಡಿರುವ ಸಚಿವರು, "ನಟಿ ವಹೀದಾ ರೆಹಮಾನ್ ಅವರಿಗೆ ಈ ವರ್ಷದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಘೋಷಿಸಲು ಬಹಳ ಸಂತೋಷವಾಗುತ್ತಿದೆ. ಗೌರವದ ಕ್ಷಣ'' ಎಂದು ಬರೆದಿದ್ದಾರೆ.
ಹಿರಿಯ ನಟಿಯ ಜನಪ್ರಿಯ ವೃತ್ತಿಜೀವನದ ಬಗ್ಗೆ ಮತ್ತಷ್ಟು ಬರೆದುಕೊಂಡಿರುವ ಸಚಿವರು, "ವಹೀದಾ ರೆಹಮಾನ್ ಅವರು ಹಿಂದಿ ಸಿನಿಮಾಗಳಲ್ಲಿನ ಪಾತ್ರಗಳಿಗಾಗಿ ಮೆಚ್ಚುಗೆ ಪಡೆದಿದ್ದಾರೆ. ಪ್ಯಾಸಾ, ಕಾಗಜ್ ಕೆ ಫೂಲ್, ಚೌಧವಿ ಕಾ ಚಾಂದ್, ಸಾಹೇಬ್ ಬೀವಿ ಔರ್ ಗುಲಾಮ್, ಗೈಡ್, ಖಾಮೋಶಿ ಸೇರಿದಂತೆ ಹಲವು ಅವರ ಪ್ರಮುಖ ಚಿತ್ರಗಳೆನ್ನಬಹುದು. 5 ದಶಕ ವೃತ್ತಿಜೀವನದಲ್ಲಿ, ಅವರು ತಮ್ಮ ಪಾತ್ರಗಳನ್ನು ಅತ್ಯಂತ ಅಚ್ಚುಕಟ್ಟಾಗಿ ತೆರೆಮೇಲೆ ಪ್ರದರ್ಶಿಸಿದ್ದಾರೆ. ರೇಷ್ಮಾ ಮತ್ತು ಶೇರಾದಂತಹ ಚಿತ್ರದಲ್ಲಿನ ಅದ್ಭುತ ಪಾತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಳ್ಳುತ್ತಿದ್ದಾರೆ'' - ಸಚಿವ ಅನುರಾಗ್ ಸಿಂಗ್ ಠಾಕೂರ್.
''ಪ್ರತಿಷ್ಠಿತ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ವಹೀದಾ ಅವರು ಕಠಿಣ ಪರಿಶ್ರಮದಿಂದ ಉನ್ನತ ಮಟ್ಟದ ವೃತ್ತಿಪರ ಸಾಧನೆಗೈ ಮಾಡಹುದೆಂಬ ಭಾರತೀಯ ನಾರಿ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ಭಾರತೀಯ ನಾರಿ ಶಕ್ತಿಯ ಜೊತೆಗೆ ಸಮರ್ಪಣೆ, ಬದ್ಧತೆಯಂತಹ ಗುಣಗಳನ್ನು ಹೊಂದಿದ್ದಾರೆ'' - ಸಚಿವ ಅನುರಾಗ್ ಸಿಂಗ್ ಠಾಕೂರ್.