ಭಾರತೀಯ ಚಿತ್ರರಂಗದ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (Dada Saheb Phalke Award) ಘೋಷಣೆಯಾಗಿದೆ. ಭಾರತ ಸರ್ಕಾರದ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. 2019ನೇ ಸಾಲಿನ ಈ ಗೌರವ ರಜಿನಿಕಾಂತ್ ಅವರಿಗೆ ಸಂದಿತ್ತು. 2020ನೇ ವರ್ಷದ ಪ್ರಶಸ್ತಿಯನ್ನು ನಟಿ ಆಶಾ ಪಾರೇಖ್ ಅವರಿಗೆ ನೀಡಲಾಗುತ್ತಿದೆ.
ಭಾರತೀಯ ಚಿತ್ರರಂಗಕ್ಕೆ ನಟಿ ಆಶಾ ಪಾರೇಖ್ ಅವರು ಸಾಕಷ್ಟು ಕೊಡುಗೆ ನೀಡಿದ್ದು ಈಗಾಗಲೇ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ 'ಪದ್ಮಶ್ರೀ', 'ಫಿಲ್ಮ್ಫೇರ್' ಸೇರಿದಂತೆ ಅನೇಕ ಗೌರವಗಳು ಸಿಕ್ಕಿದ್ದು, ಅವುಗಳ ಸಾಲಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಸೇರ್ಪಡೆ ಆಗಿದೆ.
ಚಿತ್ರರಂಗದಲ್ಲಿ 1952ರಲ್ಲಿ ಆಶಾ ಪಾರೇಖ್ ಅವರು ಅಭಿನಯ ಆರಂಭಿಸಿದರು. ಆಸ್ಮಾನ್ ಸಿನಿಮಾ ಮೂಲಕ ಬಾಲ ನಟಿಯಾಗಿ ಗುರುತಿಸಿಕೊಂಡ ಅವರನ್ನು ಬೇಬಿ ಆಶಾ ಪಾರೇಖ್ ಎಂದು ಕರೆಯಲಾಗುತ್ತಿತ್ತು. ಬಳಿಕ 1959ರಲ್ಲಿ 'ದಿಲ್ ದೇಕೆ ದೇಖೋ' ಚಿತ್ರದ ಮೂಲಕ ಹೀರೋಯಿನ್ ಆಗಿ ಶೈನ್ ಆದರು. ಆ ಸಿನಿಮಾದಲ್ಲಿ ಅವರು ಶಮ್ಮಿ ಕಪೂರ್ಗೆ ಜೋಡಿಯಾಗಿ ನಟಿಸಿದ್ದರು. ಮೊದಲ ಚಿತ್ರದಲ್ಲಿ ಭರ್ಜರಿ ಯಶಸ್ಸು ಪಡೆದುಕೊಂಡು, ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
''ಆಶಾ ಪರೇಖ್ ಅವರಿಗೆ 2020ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಇದು ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಮನ್ನಣೆಯಾಗಿದೆ'' ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಇಂದು ತಿಳಿಸಿದ್ದಾರೆ. ಶುಕ್ರವಾರ ನಡೆಯಲಿರುವ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 79 ವರ್ಷದ ಆಶಾ ಪಾರೇಖ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.