'ಆರ್ಆರ್ಆರ್' ಸಿನಿಮಾವು ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಫಿಲ್ಮ್ ಅವಾರ್ಡ್ಸ್ನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಚಿತ್ರತಂಡದ ಪರವಾಗಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಪ್ರಶಸ್ತಿ ಸ್ವೀಕರಿಸಿದ್ದು, ಬಳಿಕ 11 ವರ್ಷದ ಹಾಲಿವುಡ್ ನಟಿ ವೈಲೆಟ್ ಮೆಕ್ಗ್ರಾಳೊಂದಿಗೆ ಸೆಲ್ಫಿಗೆ ಫೋಸ್ ಕೊಟ್ಟರು. ಈ ಕ್ಯೂಟ್ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ನಿರ್ದೇಶಕ, ಮಿಲಿಯನ್ ಡಾಲರ್ ಸ್ಮೈಲ್ನಲ್ಲಿ ಮಿಂಚಿದ್ದಾರೆ.
"ಪ್ರತಿಭಾವಂತ ನಟಿ 11 ವರ್ಷದ @violetmcgraw ವೇದಿಕೆಯಲ್ಲಿ ನನಗೆ ಪ್ರಶಸ್ತಿ ನೀಡಿದಾಗ ಬಹಳಷ್ಟು ಸಂತೋಷವಾಯಿತು. ಬಳಿಕ ಅವಳೇ ನನ್ನಲ್ಲಿ ಸೆಲ್ಫಿ ಕೇಳಿದಾಗ ಇನ್ನಷ್ಟು ಖುಷಿ ಇಮ್ಮಡಿಯಾಯಿತು" ಎಂದು ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ರಾಜಮೌಳಿ ಬೂದು ಬಣ್ಣದ ಕುರ್ತಾ ಧರಿಸಿ ನಗುಮುಖದೊಂದಿಗೆ ಪೋಸ್ ನೀಡಿದ್ದು, ವೈಲೆಟ್ ಮೆಕ್ಗ್ರಾ ಹಳದಿ ಬಣ್ಣದ ಡ್ರೆಸ್ ಧರಿಸಿ ಕಂಗೊಳಿಸುತ್ತಿದ್ದರು.
'ಆರ್ಆರ್ಆರ್'ಗೆ ಸಂದ 4 ಅತ್ಯುನ್ನತ ಪ್ರಶಸ್ತಿಗಳು: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಧೂಳೆಬ್ಬಿಸಿರುವ ಆರ್ಆರ್ಆರ್ ಸಿನಿಮಾ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಗಿಟ್ಟಿಸಿಕೊಂಡಿದೆ. ಹೊಸ ಹೊಸ ದಾಖಲೆ ಬರೆಯುತ್ತಿರುವ ರಾಜಮೌಳಿ ಸಿನಿಮಾಗೆ ಒಂದೇ ವೇದಿಕೆಯಲ್ಲಿ ನಾಲ್ಕು ಪ್ರಶಸ್ತಿಗಳು ಲಭಿಸಿವೆ. ಶನಿವಾರ ನಡೆದ ಹಾಲಿವುಡ್ ಕ್ರಿಟಿಕ್ಸ್ ಫಿಲ್ಮ್ ಅವಾರ್ಡ್ನಲ್ಲಿ 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ', 'ಅತ್ಯುತ್ತಮ ಆ್ಯಕ್ಷನ್ ಚಿತ್ರ', 'ಅತ್ಯುತ್ತಮ ಹಾಡು' ಮತ್ತು 'ಅತ್ಯುತ್ತಮ ಸ್ಟಂಟ್' ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.