ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕನಸಿನ ಕೂಸು, ಕೊನೆಯ ಚಿತ್ರ ಗಂಧದ ಗುಡಿ ನಾಳೆ ಬಿಡುಗಡೆಯಾಗುತ್ತಿದೆ. ಈಗಾಗಲೇ ದೇಶದೆಲ್ಲೆಡೆ ಸಿನಿಮಾ ಕ್ರೇಜ್ ಇದ್ದು, ಕೋಟ್ಯಂತರ ಅಭಿಮಾನಿಗಳು ಚಿತ್ರ ವೀಕ್ಷಿಸಲು ಕಾತುರಾಗಿದ್ದಾರೆ. ಇದೀಗ್ ಅಪ್ಪು ಚಿತ್ರಕ್ಕೆ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಶುಭ ಹಾರೈಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಮಿಶ್ರಾ, "ಪುನೀತ್ ಭಾಯ್ ಪ್ರತಿಯೊಬ್ಬ ಅಭಿಮಾನಿಯ ಹೃದಯದಲ್ಲಿ ನೆಲೆಸಿದ್ದಾರೆ. ಅವರು ನನ್ನ ಸಹೋದರ, ಅತ್ಯುತ್ತಮ ಗೆಳೆಯ ಹಾಗೂ ಪ್ರತಿಯೊಂದು ವಿಚಾರದಲ್ಲೂ ಬೆಂಬಲಕ್ಕೆ ನಿಲ್ಲುವ ವ್ಯಕ್ತಿ. ದಯವಿಟ್ಟು ಅಕ್ಟೋಬರ್ 28ರಂದು ರಿಲೀಸ್ ಆಗುವ ಗಂಧದಗುಡಿ ಸಿನಿಮಾವನ್ನು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ವೀಕ್ಷಿಸಿ. ಈ ಮೂಲಕ ಪುನೀತ್ ಅವರ ಪರಂಪರೆಯು ಮುಂದುವರೆಯಬೇಕು. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅತ್ತಿಗೆ ಅವರಿಗೆ ಶುಭವಾಗಲಿ' ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಈವೆಂಟ್ಗೆ ವಿವಿಧ ಭಾಷೆಗಳ ದಿಗ್ಗಜ ತಾರೆಯರು ಬಂದು ಗಂಧದ ಗುಡಿ ಚಿತ್ರಕ್ಕೆ ಶುಭ ಹಾರೈಸಿದ್ದರು. ಈಗಾಗಲೇ ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಂಧದ ಗುಡಿಗೆ ತೆರಿಗೆ ವಿನಾಯಿತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ಗೆ ಇದ್ದ ಪರಿಸರ ಕಾಳಜಿ, ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿ ಹಾಗೂ ನಮ್ಮ ಕರ್ನಾಟಕದ ಅರಣ್ಯ ಸಂಪತ್ತಿನ ಬಗ್ಗೆ ಈ ಗಂಧದ ಗುಡಿ ಸಿನಿಮಾ ಒಳಗೊಂಡಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿರ್ಮಾಣ ಮಾಡಿದ್ದು, ವೈಲ್ಡ್ ಫೋಟೋಗ್ರಾಫರ್ ಅಮೋಘ ವರ್ಷ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ನಾಳೆ ಅಕ್ಟೋಬರ್ 28ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಸಮುದ್ರದಾಳದಲ್ಲೂ ಗಂಧದಗುಡಿ ಸಿನೆಮಾ ಪ್ರಚಾರ.. ಅಭಿಮಾನ ಮೆರೆದ ಅಪ್ಪು ಫ್ಯಾನ್