ಭಾರತೀಯ ಕ್ರಿಕೆಟ್ ದಂತಕಥೆ ಲಾಲಾ ಅಮರನಾಥ್ ಅವರ ಜೀವನವನ್ನು ತೆರೆ ಮೇಲೆ ತರಲು ಖ್ಯಾತ ಚಲನಚಿತ್ರ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸಿದ್ಧರಾಗಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಅವರ ಬಯೋಪಿಕ್ 2018ರಲ್ಲಿ ಬಿಡುಗಡೆ ಆಗಿತ್ತು. ಈ ಚಿತ್ರಕ್ಕೆ ರಾಜ್‌ಕುಮಾರ್ ಹಿರಾನಿ ಅವರೇ ನಿರ್ದೇಶಿಸಿದ್ದರು. ಸಂಜಯ್ ದತ್ ಬಯೋಪಿಕ್ 'ಸಂಜು' ನಂತರ ಕ್ರಿಕೆಟಿಗ ಲಾಲಾ ಅಮರನಾಥ್ ಬಯೋಪಿಕ್ ಹಿರಾನಿ ಅವರ ಎರಡನೇ ಬಯೋಪಿಕ್ ಆಗಿದೆ. ಶಾರುಖ್ ಖಾನ್ ಅಭಿನಯದ ಚಿತ್ರವನ್ನು ಪೂರ್ಣಗೊಳಿಸಿದ ನಂತರ ಹಿರಾನಿ ಈ ಬಯೋಪಿಕ್ ಕೆಲಸ ಆರಂಭಿಸಲಿದ್ದಾರೆ.
ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು 2019ರಿಂದ ಕ್ರಿಕೆಟಿಗ ಲಾಲಾ ಅಮರನಾಥ್ ಬಯೋಪಿಕ್ ಮಾಡುವ ಆಲೋಚನೆನೆಯಲ್ಲಿದ್ದರು ಎಂದು ವರದಿಯಾಗಿದೆ. ಚಿತ್ರದಲ್ಲಿ ಲಾಲಾ ಅಮರನಾಥ್ ಪಾತ್ರಕ್ಕೆ ಹಿರಾನಿ ಅವರು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಸಂಪರ್ಕಿಸಿದ್ದರು. ಆದರೆ ಶಾರುಖ್ ಸ್ಪೋರ್ಟ್ಸ್ ಬಯೋಪಿಕ್‌ಗಿಂತ ಡುಂಕಿ ಸಿನಿಮಾವನ್ನು (Dunki) ಆರಿಸಿಕೊಂಡರು.
ವರದಿಗಳ ಪ್ರಕಾರ, ಡುಂಕಿ ಸಿನಿಮಾ ಬಿಡುಗಡೆ ನಂತರ ಲಾಲಾ ಅಮರನಾಥ್ ಬಯೋಪಿಕ್ ಬಗ್ಗೆ ಕೆಲಸ ಆರಂಭಿಸಲಾಗುವುದು. ಲಾಲಾ ಅಮರನಾಥ್ ಬಯೋಪಿಕ್ ಕೆಲಸ ಚುರುಕುಗೊಳಿಸಲು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸಮತ್ತು ಅವರ ತಂಡ ಈ ವರ್ಷದ ಅಂತ್ಯದ ವೇಳೆಗೆ ಸ್ಕ್ರಿಪ್ಟಿಂಗ್ ಕೆಲಸ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಹಿರಾನಿ ಅವರು ಲಾಲಾ ಅಮರನಾಥ್ ಜೀವನಚರಿತ್ರೆಯ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ ಮತ್ತು ಡುಂಕಿ ತೆರೆ ಕಂಡ ಬಳಿಕ ಈ ಚಿತ್ರಕ್ಕೆ ಹೆಚ್ಚಿನ ಒತ್ತು ಕೊಡಲಿದ್ದಾರೆ.
ಲಾಲಾ ಅಮರನಾಥ್ ಬಯೋಪಿಕ್ ಇತರೆ ಬಯೋಪಿಕ್‌ಗಳಿಗಿಂತ ಭಿನ್ನವಾಗಿ ಇರಲಿದೆ. ರಾಜ್‌ಕುಮಾರ್ ಹಿರಾನಿ ಅವರ ನಿರ್ದೇಶನದ ಮುಂಬರುವ ಈ ಚಲನಚಿತ್ರ ಮನೋರಂಜನೆಯಿಂದ ಕೂಡಿರಲಿದೆ. ಲಾಲಾ ಅಮರನಾಥ್ ಅವರ ಕಥೆಯನ್ನು ಹಿರಾನಿ ಅವರು ತಮ್ಮದೇ ಶೈಲಿಯಲ್ಲಿ ನಿರೂಪಿಸಲಿದ್ದಾರೆ. ಮನೋರಂಜನೆ ಜೊತೆ ಜೊತೆಗೆ ಚಿಂತನಾಶೀಲವಾಗಿರಲಿದೆ. ಲಾಲಾ ಅವರ ವೃತ್ತಿಜೀವನ, ಅವರ ತೇಜಸ್ಸು ಮತ್ತು ಭಾರತೀಯ ಕ್ರಿಕೆಟ್‌ನಲ್ಲಿ ಅವರ ನಿರಂತರ ಪ್ರಭಾವವನ್ನು ಎತ್ತಿ ಹಿಡಿಯಲಿದ್ದಾರೆ ಎಂದು ಚಿತ್ರತಂಡದ ಆಪ್ತ ಮೂಲಗಳು ತಿಳಿಸಿವೆ.
ಇನ್ನೂ ಲಾಲಾ ಅಮರನಾಥ್ ಪಾತ್ರಕ್ಕೆ ನಿರ್ದೇಶಕ ಹಿರಾನಿ ಅವರು ಶಾರುಖ್ ಖಾನ್ ಅವರನ್ನು ಸಂಪರ್ಕಿಸಿದ್ದರು. ಆದರೆ ಶಾರುಖ್ ಡುಂಕಿ ಸಿನಿಮಾವನ್ನು ಆರಿಸಿಕೊಂಡಿದ್ದು, ಆ ಚಿತ್ರದ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಚಿತ್ರ ತಯಾರಕರು ಇದೀಗ ಬೇರೆ ನಟನ ಆಯ್ಕೆಯಲ್ಲಿ ತೊಡಗಿದೆ. ಈ ಬಯೋಪಿಕ್‌ನಲ್ಲಿ ಕ್ರಿಕೆಟ್ ದಂತಕಥೆಯಾಗಿ ಯಾರು ನಟಿಸುತ್ತಾರೆ ಎಂಬ ವಿಚಾರ ಬಹಳ ಕುತೂಹಲಕಾರಿಯಾಗಿದೆ.
ಇದನ್ನೂ ಓದಿ:RRR ಬಗ್ಗೆ ಸ್ಪೀಲ್‌ಬರ್ಗ್ ಗುಣಗಾನ: ಕುರ್ಚಿಯಿಂದ ಎದ್ದು ಕುಣಿಯುವಷ್ಟು ಸಂತೋಷಪಟ್ಟ ರಾಜಮೌಳಿ
ಇನ್ನೂ ಡುಂಕಿ ಸಿನಿಮಾದಲ್ಲಿ ನಟ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವ ಕುರಿತು ಮಾತನಾಡಿದ್ದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ, ಸೂಪರ್‌ಸ್ಟಾರ್ ಅವರು ನಮ್ಮ ಈ ಚಿತ್ರಕ್ಕೆ ತರುವ "ಎನರ್ಜಿ, ವರ್ಚಸ್ಸು, ಹಾಸ್ಯ ಮತ್ತು ಮೋಡಿ" ಅಪ್ರತಿಮವಾಗಿದೆ ಎಂದು ಈ ಹಿಂದೆ ಹೇಳಿದ್ದರು. ಡುಂಕಿ ಚಿತ್ರದ ಕಥಾಹಂದರದ ಬಗ್ಗೆ ವಿವರಗಳನ್ನು ಮುಚ್ಚಿಡಲಾಗಿದ್ದರೂ ಕೂಡ ಹಿರಾನಿ ಅವರು ಎಸ್‌ಕೆಆರ್ ಅವರ ಮ್ಯಾಜಿಕ್ ಅನ್ನು ದೊಡ್ಡ ಪರದೆ ಮೇಲೆ ತರುವ ಗುರಿಯನ್ನು ಹೊಂದಿದ್ದಾರೆ ಎಂಬುದು ಗೊತ್ತಾಗುತ್ತದೆ.