ರಂಗಭೂಮಿ ಕಲಾವಿದರು ಅಭಿನಯಿಸಿರುವ, ನಿತಿನ್ ಕೃಷ್ಣಮೂರ್ತಿ ಆ್ಯಕ್ಷನ್ ಕಟ್ ಹೇಳಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ಸಮಸ್ಯೆ ಎದುರಾಗಿದೆ. ಈ ಸಿನಿಮಾ ಬಿಡುಗಡೆ ಆಗಬಾರದೆಂದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ.
ತಾವೇ ಪ್ರೀತಿಯಿಂದ ನಟಿಸಿದ ಸಿನಿಮಾಗೆ ಮೋಹಕ ತಾರೆ ರಮ್ಯಾ ಸ್ಟೇ ತಂದಿದ್ದಾರೆ. ಇನ್ನೇನು ಎರಡು ದಿನ ಕಳೆದರೆ ಸಿನಿಮಾ ತೆರೆ ಕಾಣಬೇಕಿದೆ. ಇದೇ ಜುಲೈ 21ರಂದು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರ ತಂಡದಿಂದ ಘೋಷಣೆಯಾಗಿದೆ. ಆದ್ರೀಗ ಚಿತ್ರ ಬಿಡುಗಡೆ ಆಗಬಾರದೆಂದು ನಟಿ ರಮ್ಯಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈ ಚಿತ್ರದ ಸ್ಪೆಷಲ್ ರೋಲ್ನಲ್ಲಿ ರಮ್ಯಾ ಅವರು ನಟಿಸಿದ್ದು, ಇದೀಗ ತಮ್ಮ ಒಪ್ಪಿಗೆ ಇಲ್ಲದೇ ಯಾವ ದೃಶ್ಯವನ್ನೂ ಬಳಸಬಾರದು ಎಂದು ಕಮರ್ಷಿಯಲ್ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ನನ್ನ ಅನುಮತಿ ಇಲ್ಲದೇ ತಮ್ಮ ದೃಶ್ಯಗಳನ್ನು ಬಳಸಿದ್ರೆ 1 ಕೋಟಿ ರೂ. ಪರಿಹಾರ ಕೊಡುವಂತೆ ಕೇಸ್ ಹಾಕುವುದಾಗಿ ರಮ್ಯಾ ಸೂಚನೆ ನೀಡಿದ್ದಾರೆ. ಕರ್ಮಷಿಯಲ್ ಕೋರ್ಟ್ನಲ್ಲಿ ಸ್ವತಃ ರಮ್ಯಾ ಅವರು ದಾವೆ ಹೂಡಿ ನೋಟಿಸ್ ಜಾರಿ ಮಾಡಿದ್ದಾರೆ.
ನಿತಿನ್ ಕೃಷ್ಣಮೂರ್ತಿ ಆ್ಯಕ್ಷನ್ ಕಟ್ ಹೇಳಿರೋ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಗಂತ್, ರಮ್ಯಾ ಸೇರಿದಂತೆ ಹಲವರು ಗೆಸ್ಟ್ ರೋಲ್ನಲ್ಲಿ ನಟಿಸಿದ್ದಾರೆ. ಕೆಲ ದೃಶ್ಯಗಳಲ್ಲಿ ರಮ್ಯಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಮೋಷನ್ಗೆ ಬಳಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಮ್ಯಾ ಚಿತ್ರತಂಡಕ್ಕೆ ನೋಟಿಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.