ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯ ಮತ್ತು ನಿರ್ದೇಶಕ ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಕಬ್ಜ' ಸಿನಿಮಾವು ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದೆ. ಕನ್ನಡದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ 'ಕಬ್ಜ' ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಈಗಾಗಲೇ ಅದ್ಧೂರಿ ಮೇಕಿಂಗ್ ಹಾಗೂ ಟೀಸರ್ನಿಂದ ಹವಾ ಸೃಷ್ಟಿಸಿರುವ ಸಿನಿಮಾದ ಮಾಸ್ ಸಾಂಗ್ ರಿಲೀಸ್ಗೆ ಕೌಂಟ್ ಡೌನ್ ಶುರುವಾಗಿದೆ.
ಅಂದಹಾಗೆ ಸದ್ಯ ಕಬ್ಜ ಸಿನಿಮಾ ಮೋಡಿ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿರುವಾಗಲೇ, ಚಿತ್ರತಂಡದಿಂದ ಒಂದೊಂದೇ ಅಪ್ಡೇಟ್ ಹೊರಬರುತ್ತಿದೆ. ಚಿತ್ರವು ಮಾರ್ಚ್ 17ರಂದು ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ನಿರ್ದೇಶಲ ಆರ್. ಚಂದ್ರು ಈ ಸಲ ಯಾವ ರೀತಿಯ ಕಮಾಲ್ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಹೀಗಾಗಿ ಟೀಸರ್ ಬಳಿಕ ಸದ್ಯ ಮಾಸ್ ಸಾಂಗ್ ಮೇಲೆ ನಿರೀಕ್ಷೆ ಗರಿಗೆದರಿದೆ.
ಹಾಡುಗಳ ಬಗ್ಗೆ ಬಹುನಿರೀಕ್ಷೆ:ಅಂದಹಾಗೆ ಕಬ್ಜ ಸಿನಿಮಾಗೆ ಸಂಗೀತ ಮಾಂತ್ರಿಕ, ನಿರ್ದೇಶಕ ರವಿ ಬಸ್ರೂರು ಟ್ಯೂನ್ ಹೆಣೆದಿದ್ದಾರೆ. ರವಿ ಕೆಜಿಎಫ್ ಸಿನಿಮಾದಲ್ಲಿ ಸಂಗೀತ ಸಂಯೋಜನೆ ಮೂಲಕ ಸಿನಿಪ್ರಿಯರನ್ನು ಮೋಡಿ ಮಾಡಿದ್ದರು. ಈಗ ಕಬ್ಜ ಸಿನಿಮಾ ಹಾಡುಗಳ ಬಗ್ಗೆಯೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಜೊತೆಗೆ, ಚಿತ್ರವು ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರ ಅವರ ಮಗ ಅರ್ಕೇಶ್ವರ 1960-1984ರ ಅವಧಿಯಲ್ಲಿ ಭಾರತದ ಭೂಗತ ಜಗತ್ತಿನ ರಾಜನಾದ ಕಥೆಯನ್ನು ಹೊಂದಿದೆ. ಅಲ್ಲದೆ ಆತ ಭಾರತೀಯ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿರುವುದನ್ನು ಹೆಣೆಯಲಾಗಿದೆ ಎನ್ನಲಾಗ್ತಿದೆ.
ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ನಡಿ ಆರ್. ಚಂದ್ರು ಕಥೆ ಬರೆದು ನಿರ್ಮಿಸಿ, ನಿರ್ದೇಶಿಸಿರುವ 'ಕಬ್ಜ' ಚಿತ್ರವು ಶುರುವಾದಾಗಿನಿಂದಲೂ ಕುತೂಹಲ ಮೂಡಿಸುತ್ತಲೇ ಇದೆ. ಅದರಲ್ಲೂ ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ ನಿರೀಕ್ಷೆಗಳು ನೂರ್ಮಡಿಯಾಗಿವೆ ಎಂದರೆ ತಪ್ಪಿಲ್ಲ. ಕೇವಲ ಕರ್ನಾಟಕವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಈ ಚಿತ್ರಕ್ಕಾಗಿ ಬೇಡಿಕೆ ಹೆಚ್ಚಿದೆ. ಈಗಾಗಲೇ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಜನಪ್ರಿಯ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ. ಹಿಂದಿಯಷ್ಟೇ ಅಲ್ಲ, ಬೇರೆ ಅವತರಣಿಕೆಗಳ ಹಕ್ಕುಗಳಿಗೂ ಭಾರಿ ಬೇಡಿಕೆ ಇದೆ.
ಬಹುದೊಡ್ಡ ತಾರಾಗಣ:ಕಬ್ಜ ಸಿನಿಮಾದಲ್ಲಿ ಉಪೇಂದ್ರ ಹಾಗೂ ಸುದೀಪ್ ಅಲ್ಲದೇ ನಟಿ ಶ್ರೀಯಾ ಶರಣ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ, ನವಾಬ್ ಷಾ, ತೆಲುಗಿನ ಬಹುಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಸೇರಿ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಅವರ ಸಂಕಲನವಿದೆ. ರಾಜು ಸುಂದರಂ, ಗಣೇಶ್ ಹಾಗೂ ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಸದ್ಯ ಕಬ್ಜ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದೆ. ಮಾರ್ಚ್ 17ರಂದು ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆ ಆಗಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಕಬ್ಜ ಸಿನಿಮಾದ ಮೊದಲ ಮಾಸ್ ಸಾಂಗ್ ರಿಲೀಸ್ ಆಗುವ ಸಾಧ್ಯತೆ ಇದೆ. ಹಾಡು ಯಾವ ಮಟ್ಟದಲ್ಲಿ ಸಿನಿಪ್ರಿಯರ ಮನ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಅಪ್ಪು ಜನ್ಮದಿನದಂದು ಕಬ್ಜ ಚಿತ್ರ ರಿಲೀಸ್!