ಟೈಟಲ್ನಿಂದಲೇ ಸಿನಿಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ 'ಕುಶಿ'. ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ಕಲಾವಿದರಾದ ಸಮಂತಾ ರುತ್ ಪ್ರಭು ಹಾಗೂ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಅನಾವರಣಗೊಂಡಿರುವ ಟ್ರೇಲರ್ ಹಾಗೂ ಹಾಡುಗಳು ಭರಪೂರ ಮೆಚ್ಚುಗೆ ಗಳಿಸಿವೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಿದ್ದು, ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
'ಕುಶಿ' ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಾಗಿದೆ. ಸಮಂತಾ ಹಾಗೂ ನಾಗಚೈತನ್ಯ ನಟಿಸಿದ್ದ 'ಮಜಿಲಿ' ಸಿನಿಮಾದ ನಿರ್ದೇಶಕ ಶಿವ ನಿರ್ವಾಣ ಆ್ಯಕ್ಷನ್ ಕಟ್ ಹೇಳಿದ್ದಾರೆ.
ರೊಮ್ಯಾಂಟಿಕ್ ಲವ್ ಸ್ಟೋರಿ 'ಕುಶಿ'ಯಲ್ಲಿ ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವೆನ್ನೆಲಾ ಕಿಶೋರ್, ರೋಹಿಣಿ ಸೇರಿದಂತೆ ಹಲವರಿದ್ದಾರೆ. ಹೇಷಂ ಅಬ್ದುಲ್ ವಹಾಬ್ ಸಂಗೀತ, ಜಿ.ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನವಿದೆ. ಸೆಪ್ಟೆಂಬರ್ 1ಕ್ಕೆ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ತಮ್ಮ ಅಭಿನಯದ ಕೊನೆಯ ಸಿನಿಮಾಗಳಲ್ಲಿ ಕೊಂಚ ಹಿನ್ನೆಡೆ ಕಂಡಿರುವ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅವರಿಗೆ 'ಕುಶಿ' ಕೊಡುತ್ತಾ ಎಂಬುದನ್ನು ಕಾದುನೋಡಬೇಕಿದೆ.