ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಆಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ನಟ ಚಿರಂಜೀವಿ ಸರ್ಜಾ. ಕಡಿಮೆ ಸಮಯದಲ್ಲಿ ತನ್ನದೇ ಛಾಪು ಮೂಡಿಸಿದ್ದರು. ಇಂದಿಗೆ ಅವರು ನಿಧನರಾಗಿ ಎರಡು ವರ್ಷ ತುಂಬುತ್ತಿದೆ. ಆದರೆ, ಚಿರಂಜೀವಿ ಸರ್ಜಾ ನೆನಪು ಮಾತ್ರ ಅವರ ಕುಟುಂಬದವರು ಹಾಗೂ ಅಭಿಮಾನಿಗಳನ್ನ ಕಾಡುತ್ತಿದೆ.
ಚಿರಂಜೀವಿ ಸರ್ಜಾ ಎರಡನೇ ವರ್ಷದ ಪುಣ್ಯಸ್ಮರಣೆ ಸದಾ ನಗುತ್ತಾ ಎಲ್ಲರನ್ನ ಕಾಮಿಡಿ ಮಾಡ್ತಾ ಜೊತೆಯಲ್ಲಿದ್ದ ಚಿರಂಜೀವಿ ಸರ್ಜಾ ನಿಧನರಾಗಿ ಎರಡು ವರ್ಷಗಳು ಕಳೆದಿದೆ. ಹೀಗಾಗಿ, ಕನಕಪುರ ರಸ್ತೆಯ ನೆಲಗುಳಿಯ ಧ್ರುವ ಫಾರ್ಮ್ ಹೌಸ್ನಲ್ಲಿರುವ ಚಿರು ಸಮಾಧಿಗೆ ಸಹೋದರ ಧ್ರುವ ಸರ್ಜಾ, ಪುತ್ರಿ ಪ್ರೇರಣಾ, ಅತ್ತಿಗೆ ಮೇಘನಾ ರಾಜ್, ಚಿರು ಪುತ್ರ ರಾಯನ್ ಸರ್ಜಾ, ಸುಂದರ ರಾಜ್ ಹಾಗೂ ಪ್ರಮೀಳಾ ಜೋಷಾಯ್, ಚಿರು ತಂದೆ ವಿಜಯ್, ತಾಯಿ ಅಮ್ಮಾಜಿ, ಚಿರು ಅಜ್ಜಿ ಲಕ್ಷ್ಮೀ ದೇವಿ ಸೇರಿದಂತೆ ಇಡೀ ಮೇಘನಾ ರಾಜ್ ಹಾಗೂ ಧ್ರುವ ಸರ್ಜಾ ಕುಟುಂಬದವರಿಂದ ಸರಿ ಸುಮಾರು ಒಂದು ಗಂಟೆ ಸುಮಾರಿಗೆ ಪೂಜೆ ಸಲ್ಲಿಸಲಾಯಿತು.
ಕಳೆದ ವರ್ಷ ಕೊರೊನಾದಿಂದ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಿರಲಿಲ್ಲ. ಆದರೆ, ಈ ವರ್ಷ ಚಿರಂಜೀವಿ ಸರ್ಜಾ ಎರಡನೇ ವರ್ಷದ ಪುಣ್ಯಸ್ಮರಣೆಯನ್ನ ಅದ್ದೂರಿಯಾಗಿ ಮಾಡಲಾಯಿತು. ಇನ್ನು ಚಿರಂಜೀವಿ ಸರ್ಜಾ ಎರಡನೇ ವರ್ಷದ ಪುಣ್ಯಸ್ಮರಣೆಗೆ ಎರಡು ಕುಟುಂಬದಿಂದ ಹಿಡಿದು, ಸ್ನೇಹಿತರು ಹಾಗೂ ಅಭಿಮಾನಿಗಳು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ.
ಅಭಿಮಾನಿಗಳಿಗೂ ಚಿರು ಸಮಾದಿ ದರ್ಶನ ಮಾಡೋಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಧ್ರುವ ಸರ್ಜಾ, ಕನಕಪುರದ ನೆಲಗುಳಿಯ ತನ್ನ ಫಾರಂ ಹೌಸ್ನಲ್ಲಿ ಚಿರು ಅಂತ್ಯಸಂಸ್ಕಾರ ಮಾಡಿರುವ ಸ್ಥಳದಲ್ಲಿ ಅಣ್ಣನ ಸ್ಮಾರಕ ಕಟ್ಟಿಸಲಾಗಿದೆ. ಸದ್ಯ ಚಿರಂಜೀವಿ ಸರ್ಜಾ ಸ್ಮಾರಕವನ್ನ ನಿರ್ಮಾಣ ಮಾಡಲಾಗಿದೆ. ಸಮಾಧಿ ಬಳಿ ಚಿರು ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಕೆತ್ತನೆ ಮಾಡಲಾಗಿದೆ. ಒಟ್ಟಿನಲ್ಲಿ ಚಿರಂಜೀವಿ ಸರ್ಜಾ ಅಗಲಿಕೆ ಅವರ ಕುಟುಂಬ ಅಲ್ಲದೇ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಓದಿ:ಭಜರಂಗಿ 2 ಬಳಿಕ ಬೈರಾಗಿ ಮೂಲಕ ತೆರೆ ಮೇಲೆ ಅಬ್ಬರಿಸಲು ಹ್ಯಾಟ್ರಿಕ್ ಹೀರೋ ರೆಡಿ