ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಅವರು ಇಂದು ಮುಂಜಾನೆ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡು, "ಶೀಘ್ರದಲ್ಲೇ ಬರಲಿದೆ. ನನ್ನ ಪುಟ್ಟ ಪ್ರಿಯತಮೆಯ ಭೇಟಿಗೆ ಕಾಯಲು ಸಾಧ್ಯವಿಲ್ಲ" ಎಂಬ ಶೀರ್ಷಿಕೆ ಬರೆದುಕೊಂಡು ಖುಷಿಯ ವಿಷಯವನ್ನು ತಿಳಿಸಿದ್ದಾರೆ. ಇದು ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದರೂ, ನಟಿಯ ಗುಡ್ನ್ಯೂಸ್ ಕೇಳಿ ಖುಷಿಯಾಗಿದ್ದಾರೆ.
ಮೊದಲ ಚಿತ್ರದಲ್ಲಿ ಬರ್ಫಿ ನಟಿ ಮಗುವಿನ ಬಟ್ಟೆಯನ್ನು ಪೋಸ್ಟ್ ಮಾಡಿದ್ದು, ಅದರ ಮೇಲೆ 'ಅಡ್ವೆಂಚರ್ ಬಿಗಿನ್ಸ್' ಎಂಬ ಬರಹವಿದೆ. ಮತ್ತೊಂದು ಚಿತ್ರದಲ್ಲಿ, Mama ಎಂದು ಬರೆದಿರುವ ಒಂದು ಸುಂದರ ಪೆಂಡೆಂಟ್ ಇದೆ. ನಟಿ ತಮ್ಮ ಮೊದಲ ಮಗುವಿನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಅವರು ತಮ್ಮ ಸಂಗಾತಿಯ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ. ಅವರು ಈ ಪೋಸ್ಟ್ ಅಪ್ಲೋಡ್ ಮಾಡಿದ ಕೂಡಲೇ ಅಭಿಮಾನಿಗಳು ರೆಡ್ ಹಾರ್ಟ್ ಎಮೋಜಿ ಮತ್ತು ಅಭಿನಂದನಾ ಸಂದೇಶಗಳೊಂದಿಗೆ ಕಮೆಂಟ್ ವಿಭಾಗವನ್ನು ತುಂಬಿದ್ದಾರೆ.
'ಅಭಿನಂದನೆಗಳು ಪ್ರಿಯೆ' ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, 'ವಾವ್ ಅಭಿನಂದನೆಗಳು ಆಲ್ ದಿ ಬೆಸ್ಟ್' ಎಂದು ಬರೆದಿದ್ದಾರೆ. ಒಬ್ಬ ಬಳಕೆದಾರ, 'ಹೇ, ಕಂಗ್ರಾಜುಲೇಷನ್ಸ್' ಎಂದಿದ್ದಾರೆ. ಮತ್ತೊಬ್ಬರು, 'ಓ ಮೈ ಗಾಡ್! ಅಭಿನಂದನೆಗಳು' ಎಂದು ಪ್ರತಿಕ್ರಿಯಿಸಿದ್ದಾರೆ. ಮೊದಲಿನಿಂದಲೂ ಇಲಿಯಾನಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಷ್ಟೊಂದು ಮಾತನಾಡುವುದಿಲ್ಲ. ಅವರು ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮಿಚ್ಚೆಲ್ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿಗಳಿದ್ದವು.