ಭಿಕ್ಷುಕ, ಬಡವ, ಕೂಲಿ ಕಾರ್ಮಿಕ ಇಂತಹ ಪಾತ್ರಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ಹಾಸ್ಯ ನಟ ವೈಜನಾಥ್ ಬಿರಾದಾರ್. ಕನಸೆಂಬೋ ಕುದುರೆಯನೇರಿ ಚಿತ್ರಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಬಿರಾದಾರ್ ಈಗ '90 ಬಿಡಿ ಮನೀಗ್ ನಡಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ 500ನೇ ಸಿನಿಮಾ ಎನ್ನುವುದು ವಿಶೇಷ.
ಪೋಸ್ಟರ್ ಹಾಗು ಹಾಡುಗಳಿಂದಲೇ ಗಮನ ಸೆಳೆಯುತ್ತಿರೋ '90 ಬಿಡಿ ಮನೀಗ್ ನಡಿ' ಸಿನಿಮಾದ ಹಾಡು ಮತ್ತು ಟ್ರೈಲರ್ಅನ್ನು ಇಂದು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಾಸ್ಯ ನಟ ವೈಜನಾಥ್ ಬಿರಾದಾರ್, ಈ ಚಿತ್ರದಲ್ಲಿ ನಟಿಸಿರೋ ರಂಗಭೂಮಿ ನಟಿ ನೀತು, ನಟರಾದ ಧರ್ಮ, ಕರಿಸುಬ್ಬು, ಸಂಗೀತ ನಿರ್ದೇಶಕ ಶಿವು ಭೇರಗಿ ಹಾಗು ಜಂಟಿಯಾಗಿ ನಿರ್ದೇಶನ ಮಾಡಿರೋ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ನಿರ್ದೇಶಕರು ಉಪಸ್ಥಿತರಿದ್ದರು.
90 ಬಿಡಿ ಮನೀಗ್ ನಡಿ ಸಿನಿಮಾದ ಹಾಡು ಮತ್ತು ಟ್ರೈಲರ್ ಬಿಡುಗಡೆ ಸಮಾರಂಭ ಮೊದಲಿಗೆ ಮಾತನಾಡಿದ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ, ಇದೊಂದು ಕಾಮಿಡಿ ಚಿತ್ರ. ಅಲ್ಲದೆ, ಮದ್ಯಪಾನದಿಂದಾಗುವ ದುಷ್ಪರಿಣಾಮಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಕಥೆ ಹಾಗೂ ಸಂಭಾಷಣೆಯನ್ನು ಉಮೇಶ್ ಬಾದರದಿನ್ನಿ ಅವರೇ ಬರೆದಿದ್ದಾರೆ. ಚಿತ್ರಕಥೆಯನ್ನು ಇಬ್ಬರು ನಿರ್ದೇಶಕರು ಸೇರಿ ರಚಿಸಿದ್ದಾರೆ.
ಎಲ್ಲಾರಿಗೂ ಅಚ್ಚರಿ ಆಗುತ್ತೆ: ಉಮೇಶ್ ಬಾದರದಿನ್ನಿ ಇದಕ್ಕೂ ಮುನ್ನ ಬಿಡಲಾರೆ ಎಂದೂ ನಿನ್ನ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಇದರೊಂದಿಗೆ ಹಾರೋ ಹಕ್ಕಿ ಹಾಗೂ ಕೀಟ್ಲೆ ಕೃಷ್ಣ ಎಂಬ ಮಕ್ಕಳ ಚಿತ್ರಗಳನ್ನು ಕೂಡಾ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿರೋ ನಟ ಧರ್ಮ, ವೈಜನಾಥ್ ಬಿರಾದಾರ್ ಡ್ಯಾನ್ಸ್ ನೋಡಿದ್ರೆ ಎಲ್ಲಾರಿಗೂ ಅಚ್ಚರಿ ಆಗುತ್ತೆ ಎಂದರು.
ಸಿನಿಮಾದಲ್ಲಿ ಸಂದೇಶ ಇದೆ: ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ರಂಗಭೂಮಿ ಕಲಾವಿದೆ ನೀತು. ಈ ಚಿತ್ರದಲ್ಲಿ ವೈಜನಾಥ್ ಬಿರಾದಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಡ್ಯಾನ್ಸ್ ಜೊತೆಗೆ ಫೈಟ್ ಮಾಡಿರೋ ವೈಜನಾಥ್ ಬಿರಾದಾರ್ ಮಾತನಾಡಿ, ಈ ಚಿತ್ರದಲ್ಲಿ ನಾನು ಪೇಪರ್ ಆಯುವ ಪಾತ್ರ ಮಾಡಿದ್ದೀನಿ. ಈ ಸಿನಿಮಾದಲ್ಲಿ ಸಂದೇಶ ಇದೆ. ನಿರ್ದೇಶಕರು ಹಾಗು ನಿರ್ಮಾಪಕರು ಇದ್ದರೆ ನಮ್ಮಂಥ ಕಲಾವಿದರು ಬೆಳೆಯೋದಿಕ್ಕೆ ಕಾರಣ. ಜೊತೆಗೆ ಕಲ್ಲಿನಂಥ ಕಲಾವಿದನನ್ನು ಶಿಲ್ಪಿ ಮಾಡುವ ತಾಖತ್ ಇರೋದು ನಿರ್ದೇಶಕನಿಗೆ ಎಂದು ಹೇಳಿದರು.
ದೊಡ್ಡ ತಾರಬಳಗ ಈ ಚಿತ್ರದಲ್ಲಿದೆ: ಇನ್ನು ವೈಜನಾಥ್ ಬಿರಾದಾರ್, ನೀತು ಅಲ್ಲದೇ ಕರಿಸುಬ್ಬು, ಧರ್ಮ, ಪೂಜಾ, ಅಭಯ್ ವೀರ್, ಪ್ರಶಾಂತ್ ಸಿದ್ದಿ, ಆರ್.ಡಿ. ಬಾಬು, ವಿವೇಕ್ ಜಂಬಗಿ ಹೀಗೆ ದೊಡ್ಡ ತಾರಬಳಗ ಈ ಚಿತ್ರದಲ್ಲಿದೆ. ಹಾಗೂ ಇನ್ನಿತರರು ನಟಿಸಿದ್ದಾರೆ.
ಚಿತ್ರದಲ್ಲಿ 3 ಹಾಡುಗಳಿದ್ದು, ಕಿರಣ್ ಶಂಕರ್-ಶಿವು ಭೇರಗಿ ಸಂಗೀತ ನಿರ್ದೇಶನವಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರಕ್ಕಾಗಿ ಎರಡು ಹಾಡುಗಳು, ಶಿವು ಭೇರಗಿ ಒಂದು ಹಾಡನ್ನು ಬರೆದಿದ್ದಾರೆ. ವೀರ್ ಸಮರ್ಥ್ ಹಿನ್ನೆಲೆ ಸಂಗೀತದಲ್ಲಿ ಸಾಥ್ ನೀಡಿದ್ದಾರೆ. ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನ, ರಾಜಾ ರಮೇಶ್ ಸಾಹಸ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಹಾಡುಗಳಿಂದ ಗಮನ ಸೆಳೆದ ಸಿನಿಮಾ: ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆ ಲಾಂಛನದಲ್ಲಿ ರತ್ನಮಾಲ ಬಾದರದಿನ್ನಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೈಲರ್ ಹಾಗು ಹಾಡುಗಳಿಂದ ಗಮನ ಸೆಳೆಯುತ್ತಿರೋ 90 ಬಿಡಿ ಮನೀಗ್ ನಡಿ ಸಿನಿಮಾ ವೈಜನಾಥ್ ಬಿರಾದಾರ್ಗೆ ಒಳ್ಳೆ ಹೆಸರು ತಂದು ಕೊಡುವ ಸೂಚನೆ ಸಿಗುತ್ತಿದೆ.
ಓದಿ:ಪುಷ್ಪ ದಿ ರೂಲ್ ಚಿತ್ರೀಕರಣ ಶುರು: ಸಾಮಾಜಿಕ ಜಾಲತಾಣದಲ್ಲಿ ಮುಹೂರ್ತದ ಫೋಟೋಗಳು ವೈರಲ್