ಕನ್ನಡ ಚಿತ್ರರಂಗದಲ್ಲಿ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಲಹರಿ ಸಂಸ್ಥೆ ಆರಂಭವಾಗಿ 48 ವರ್ಷಗಳು ಕಳೆದಿವೆ. ಈಗ ಮತ್ತೊಂದು ವಿಶೇಷವೆಂದರೆ ಈ ಸಂಸ್ಥೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿಕೇಜ್ ನೇತೃತ್ವದಲ್ಲಿ ಡಿವೈನ್ ಟೈಡ್ಸ್ ಎಂಬ ಅದ್ಭುತ ಆಲ್ಬಂ ಮೂಡಿ ಬಂದಿದೆ. ಕೆಲವು ತಿಂಗಳ ಹಿಂದೆ, ಈ ಆಲ್ಬಂಗಾಗಿ ರಿಕ್ಕಿಕೇಜ್ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಸಹ ಪಡೆದಿದ್ದಾರೆ. ರಿಕ್ಕಿಕೇಜ್ ಅವರಿಗೆ ಎರಡನೇ ಬಾರಿಗೆ ಗ್ರ್ಯಾಮಿ ಅವಾರ್ಡ್ ಬಂದಿದೆ.
ಈ ಸಂತಸ ಹಂಚಿಕೊಳ್ಳಲು ಲಹರಿ ಸಂಸ್ಥೆ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್, ಕ್ರೇಜಿಸ್ಟಾರ್ ರವಿಚಂದ್ರನ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಾಜೇಂದ್ರ ಸಿಂಗ್ ಬಾಬು, ವಸಿಷ್ಠ ಸಿಂಹ, ಗುರುಕಿರಣ್, ಉದಯ್ ಕೆ ಮೆಹ್ತಾ, ಕೆ.ಪಿ. ಶ್ರೀಕಾಂತ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಾನು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ವೇಲು ಅವರನ್ನು ಮೊದಲಿನಿಂದಲೂ ಬಲ್ಲೆ. ನಮ್ಮ ಪಕ್ಕದ ಮನೆಯವರು ಅವರು. ಲಹರಿ ಸಂಸ್ಥೆ ಈ ಎತ್ತರಕ್ಕೆ ಬೆಳೆದಿರುವುದು ಖುಷಿ ತಂದಿದೆ. ಇಲ್ಲಿಗೆ ಬಂದಾಗ ಈ ಆಲ್ಬಂನ ಒಂದು ಹಾಡು ನೋಡಿ ತುಂಬಾ ಸಂತೋಷವಾಯಿತು. ಗ್ರ್ಯಾಮಿ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಅದರ ಬಗ್ಗೆ ತಿಳಿದು ಆಶ್ಚರ್ಯವಾಯಿತು. ರಿಕ್ಕಿಕೇಜ್ ಎರಡು ಸಲ ಈ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಅಭಿನಂದನಾರ್ಹ. ಅವರ ಸಾಧನೆ ಇಡೀ ಕನ್ನಡಿಗರು ಹೆಮ್ಮೆ ಪಡುವಂತದು. ಅವರಿಂದ ಇನ್ನಷ್ಟು ಈ ರೀತಿಯ ಸಾಧನೆಯಾಗಲಿ. ಅದು ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹಾರೈಸಿದರು.