ಕರ್ನಾಟಕ

karnataka

ETV Bharat / entertainment

ದ್ವೇಷ ಉಂಟುಮಾಡಲು 'ಕೇರಳ ಸ್ಟೋರಿ' ಸಿನಿಮಾ ನಿರ್ಮಾಣ: ಸಿಎಂ ಪಿಣರಾಯಿ ವಿಜಯನ್

ಬಿಡುಗಡೆಗೆ ಸಿದ್ಧವಾಗಿರುವ ಕೇರಳ ಸ್ಟೋರಿ ಚಲನಚಿತ್ರವು ಸಂಘ ಪರಿವಾರದ ಸುಳ್ಳಿನ ಕಾರ್ಖಾನೆಯ ಉತ್ಪನ್ನ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆರೋಪಿಸಿದರು.

ಕೇರಳ ಸಿಎಂ ಪಿಣರಾಯಿ ವಿಜಯನ್
ಕೇರಳ ಸಿಎಂ ಪಿಣರಾಯಿ ವಿಜಯನ್

By

Published : Apr 30, 2023, 6:48 PM IST

ತಿರುವನಂತಪುರಂ (ಕೇರಳ): ‘ದಿ ಕೇರಳ ಸ್ಟೋರಿ’ ಚಿತ್ರ ನಿರ್ಮಾಪಕರ ವಿರುದ್ಧ ಇಂದು (ಭಾನುವಾರ) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದರು. ‘ಲವ್ ಜಿಹಾದ್’ ವಿಷಯವನ್ನು ಎತ್ತುವ ಮೂಲಕ ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಬಿಂಬಿಸುವ ಸಂಘ ಪರಿವಾರದ ಕೆಲಸವನ್ನು ಸಿನಿಮಾ ನಿರ್ಮಾಪಕರು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಮತ್ತು ರಾಜ್ಯದ ವಿರುದ್ಧ ದ್ವೇಷದ ಪ್ರಚಾರ ಹರಡುವ ಉದ್ದೇಶದಿಂದ ಸಿನಿಮಾ ನಿರ್ಮಿಸಲಾಗಿದೆ ಎಂದು ಟ್ರೇಲರ್‌ ಮೂಲಕ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ. 'ಲವ್ ಜಿಹಾದ್' ವಿಚಾರವನ್ನು ತನಿಖಾ ಸಂಸ್ಥೆಗಳು, ನ್ಯಾಯಾಲಯಗಳು ತಿರಸ್ಕರಿಸಿದ್ದರೂ, ಕೇರಳ ರಾಜ್ಯವನ್ನು ಪ್ರಪಂಚದ ಮುಂದೆ ಅವಮಾನಿಸುವಂತೆ ಸಿನಿಮಾ ಮಾಡಲಾಗುತ್ತಿದೆ ಎಂದಿದ್ದಾರೆ.

'ಸಂಘ ಪರಿವಾರದ ಸುಳ್ಳು ಕಾರ್ಖಾನೆಯ ಉತ್ಪನ್ನ': ದ ಕೇರಳ ಸ್ಟೋರಿ ಸಿನಿಮಾದ ಟ್ರೇಲರ್ ನೋಡಿದರೆ, ಜಾತ್ಯತೀತತೆಯ ನೆಲವಾದ ಕೇರಳದಲ್ಲಿ ಧಾರ್ಮಿಕ ಉಗ್ರವಾದದ ಕೇಂದ್ರವಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಸಂಘ ಪರಿವಾರದ ಪ್ರಚಾರವನ್ನು ಹರಡಲು ಚಿತ್ರ ಪ್ರಯತ್ನಿಸುತ್ತಿದೆ. ಸಂಘ ಪರಿವಾರವು ನಕಲಿ ಕಥೆಗಳು ಮತ್ತು ಚಲನಚಿತ್ರಗಳ ಮೂಲಕ ವಿಭಜನೆಯ ರಾಜಕೀಯ ಹರಡಲು ಪ್ರಯತ್ನಿಸುತ್ತಿದೆ. ಯಾವುದೇ ಸತ್ಯ ಮತ್ತು ಪುರಾವೆಗಳಿಲ್ಲದೆ ಇಂತಹ ಕಟ್ಟು ಕಥೆಗಳನ್ನು ಹರಡುತ್ತಿದ್ದಾರೆ. ಕೇರಳದಲ್ಲಿ 32,000 ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್ ಸೇರಿದ್ದಾರೆ ಎಂಬ ದೊಡ್ಡ ಸುಳ್ಳು ಚಿತ್ರದ ಟ್ರೇಲರ್‌ನಲ್ಲಿದೆ. ಈ ನಕಲಿ ಕಥೆ ಅವರ ಸುಳ್ಳು ಕಾರ್ಖಾನೆಯ ಉತ್ಪನ್ನ. ರಾಜ್ಯದಲ್ಲಿ ಮತೀಯವಾದವನ್ನು ಹರಡಲು ಮತ್ತು ಒಡಕುಗಳನ್ನು ಸೃಷ್ಟಿಸಲು ಸಿನಿಮಾ ಬಳಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಸಮರ್ಥನೆಯಾಗಲಾರದು ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಸುಳ್ಳು ಮತ್ತು ಕೋಮುವಾದವನ್ನು ಹರಡಲು ಹಾಗೂ ಜನರನ್ನು ವಿಭಜಿಸಲು ನಾವು ಪರವಾನಗಿ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಮಲಯಾಳಿಗಳು ಇಂತಹ ನಡೆಗಳನ್ನು ತಿರಸ್ಕರಿಸಬೇಕು. ಸುಳ್ಳು ಪ್ರಚಾರದ ಮೂಲಕ ಸಮಾಜದಲ್ಲಿ ಕೋಮುಗಲಭೆ ಹರಡುವ ಪ್ರಯತ್ನಗಳ ವಿರುದ್ಧ ಎಚ್ಚರದಿಂದಿರಬೇಕು ಎಂದು ವಿಜಯನ್ ತಿಳಿಸಿದ್ದಾರೆ. ಸುಳ್ಳು ಹೇಳಿಕೆಗಳ ಮೂಲಕ ಸಮಾಜದಲ್ಲಿ ಕೋಮು ವಿಭಜನೆ ಸೃಷ್ಟಿಸುವ ಉದ್ದೇಶದಿಂದ ನಿರ್ಮಿಸಿರುವ ವಿವಾದಾತ್ಮಕ ಚಲನಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡದಂತೆ ಕಾಂಗ್ರೆಸ್ ಈ ಹಿಂದೆ​ ಇಲ್ಲಿನ ಸಿಪಿಐ ಸರ್ಕಾರವನ್ನು ಒತ್ತಾಯಿಸಿತ್ತು.

ಮೇ 5 ರಂದು ಸಿನಿಮಾ ಬಿಡುಗಡೆ: ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಕೂಡ ಚಿತ್ರದ ವಿರುದ್ಧ ವಾಗ್ದಾಳಿ ನಡೆಸಿದೆ. ಟ್ರೇಲರ್ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ತಿಳಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.

ಅದಾ ಶರ್ಮಾ ಅಭಿನಯದ 'ದ ಕೇರಳ ಸ್ಟೋರಿ' ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾವನ್ನು ಸುದೀಪ್ತೋ ಸೇನ್ ಬರೆದು ನಿರ್ದೇಶಿಸಿದ್ದಾರೆ. ಕೇರಳದಲ್ಲಿ ಸುಮಾರು 32,000 ಮಹಿಳೆಯರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್‌ನ ಸದಸ್ಯರನ್ನಾಗಿ ಮಾಡಲಾಗಿದೆ ಎಂಬ ಕಥಾವಸ್ತುವನ್ನು ಸಿನಿಮಾ ಹೊಂದಿದೆ.

ಇದನ್ನೂ ಓದಿ:ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ 'ಪೊನ್ನಿಯಿನ್ ಸೆಲ್ವನ್ 2': ಸೌತ್​ ಚಿತ್ರರಂಗಕ್ಕೆ ಮತ್ತೊಂದು ಗೆಲುವು

ABOUT THE AUTHOR

...view details