ಬೆಂಗಳೂರು:ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಯಾವುದೇ ಸ್ಟಾರ್ ಡಮ್ ಇಲ್ಲದೇ, ಚಾರ್ಲಿ ಎಂಬ ಶ್ವಾನದ ಜೊತೆ ಅಭಿನಯಿಸಿರೋ ಸಿನಿಮಾ 777 ಚಾರ್ಲಿ. ಕಳೆದ ಶುಕ್ರವಾರ ಕರ್ನಾಟಕ ಅಲ್ಲದೇ ವಿಶ್ವಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ 777 ಚಾರ್ಲಿ, ಸಿನಿಮಾವನ್ನು ಸಾಮಾನ್ಯ ಪ್ರೇಕ್ಷಕರು ಅಲ್ಲದೇ ಸಿನಿಮಾ ತಾರೆಯರು ಹಾಗು ಗಣ್ಯರು ಮೆಚ್ಚಿಕೊಂಡಿದ್ದಾರೆ.
ಇದೀಗ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ತಮ್ಮ ರಾಜಕೀಯದಿಂದ ಬಿಡುವು ಮಾಡಿಕೊಂಡು, ಬೆಂಗಳೂರಿನ ಒರಾಯನ್ ಮಾಲ್ನಲ್ಲಿರುವ ಪಿವಿಆರ್ ಚಿತ್ರಮಂದಿರದಲ್ಲಿ 777 ಚಾರ್ಲಿ ಕನ್ನಡ ಚಲನಚಿತ್ರವನ್ನು ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ, ಶಾಸಕ ರಘುಪತಿ ಭಟ್, ನಟ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ರಾಜ್ ಉಪಸ್ಥಿತರಿದ್ದರು.
777 ಚಾರ್ಲಿ ಸಿನಿಮಾ ನೋಡಿ, ಹೊರಗಡೆ ಬಂದ, ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಚಾರ್ಲಿ ಸಿನಿಮಾದ ಟ್ರೈಲರ್ ನೋಡಿ ನನಗೆ ಸಿನಿಮಾ ನೋಡಬೇಕು ಅನ್ನಿಸಿತು. ಯಾಕೆಂದರೆ ನಾನು ಕೂಡ ಶ್ವಾನ ಪ್ರಿಯ. ಮನುಷ್ಯನನ್ನು ಹೆಚ್ಚು ಪ್ರೀತಿ ಮಾಡೋ ನಂಬಿಕೆಯ ಪ್ರಾಣಿ ಅಂದರೆ ಶ್ವಾನ. ನಾಯಿ ಮತ್ತು ಮನುಷ್ಯನ ಸಂಬಂಧವನ್ನು ಅತ್ಯಂತ ಸೂಕ್ಷವಾಗಿ ಈ ಸಿನಿಮಾದಲ್ಲಿ ತೋರಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ಅಧಗ ಅದ್ಭುತ ಸಿನಿಮಾ ತೆಗೆದಿದ್ದಾರೆ. ಈ ಸಿನಿಮಾವನ್ನು ಸೂಕ್ಷ್ಮವಾಗಿ ಭಾವನಾತ್ಮಕವಾಗಿ ಚಿತ್ರೀಕರಣ ಮಾಡಿದ್ದಾರೆ.