'ಸಲಗ' ನಟ ದುನಿಯಾ ವಿಜಯ್ ಅವರ ನಿರ್ದೇಶನದ ಬತ್ತಳಿಕೆಯಿಂದ ಹೊರಬಂದ ಮೊದಲ ಚಿತ್ರ. ಅವರಿಗೆ ಸ್ಯಾಂಡಲ್ವುಡ್ ಅಲ್ಲದೇ ಪರಭಾಷೆಯಲ್ಲಿಯೂ ಬೇಡಿಕೆ ತಂದುಕೊಟ್ಟ ಸೂಪರ್ ಹಿಟ್ ಸಿನಿಮಾ ಕೂಡ ಹೌದು. ಈ ಚಿತ್ರದ ಯಶಸ್ಸಿನ ಬಳಿಕ ವಿಜಯ್, ಇದೀಗ 'ಭೀಮ' ಚಿತ್ರದಲ್ಲಿ ಬ್ಯುಸಿಯಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಚಿತ್ರದ ಚಿತ್ರೀಕರಣ ಭಾಗಶಃ ಮುಗಿದಿದ್ದು ಕ್ಲೈಮ್ಯಾಕ್ಸ್ ಶೂಟಿಂಗ್ ಕೂಡ ಭರದಿಂದ ಸಾಗಿದೆ. ನೈಜ ಘಟನೆ ಆಧರಿಸಿರುವ ಚಿತ್ರ ಇದಾಗಿದ್ದು, ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.
ವಿನೋವಾ ನಗರದ ಗಲ್ಲಿಗಳಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆದಿದ್ದು, ಕೊನೆ ದಿನದ ಚಿತ್ರೀಕರಣ ಮುಕ್ತಾಯವಾಗಿದೆ. 'ಭೀಮ' ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ದುನಿಯಾ ವಿಜಿಯನ್ನು ಪೊಲೀಸರು ಬಂಧನ ಮಾಡುವ ದೃಶ್ಯವನ್ನು ಸೆರೆ ಹಿಡಿಯಲಾಯಿತು. ರಕ್ತದಿಂದ ಕೂಡಿರುವ ದುನಿಯಾ ವಿಜಿಯನ್ನು ನೂರಾರು ಜನಗಳ ಮಧ್ಯೆಯೇ ರಿಯಲ್ಲಾಗಿ ಚಿತ್ರೀಕರಣ ಮಾಡಲಾಯಿತು. ಖಾಕಿ ಪಡೆ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗುತ್ತಿರವ ಚಿತ್ರದ ದೃಶ್ಯವನ್ನು ಜನ ಕಣ್ತುಂಬಿಕೊಂಡರು.
ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು ಯ್ಯೂಟೂಬ್ನಲ್ಲಿ ರಾರಾಜಿಸುತ್ತಿವೆ. ಅದರಲ್ಲೂ ಬ್ಯಾಡ್ ಬಾಯ್ಸ್ ಎಂಬ ಹಾಡು ಪಡ್ಡೆ ಹುಡುಗರ ಮನಗೆದ್ದರೆ, ಲವ್ ಯೂ ಕಣೆ ಹಾಡು ಪ್ರೇಮಿಗಳ ಮನ ತುಂಬಿಸಿದೆ. ಇವೆರಡು ಹಾಡು ಯ್ಯೂಟೂಬ್ನಲ್ಲಿ ಸಖತ್ ಆಗಿ ಸೌಂಡ್ ಮಾಡುತ್ತಿವೆ. ನೆಟಿಜನ್ಸ್ ಮತ್ತು ಸಿನಿ ಪ್ರೇಮಿಗಳಿಂದ ಸಖತ್ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಚಿತ್ರದಲ್ಲಿ ದುನಿಯಾ ವಿಜಿ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ, ಬ್ಲ್ಯಾಕ್ ಡ್ರಾಗನ್ ಮಂಜು ಸೇರಿದಂತೆ ದೊಡ್ಡ ತಾರಬಳಗ ಇದೆ.