ಇತ್ತೀಚೆಗೆ ನೈಜ ಘಟನೆ ಹಾಗೂ ಸಾಧಕರ ಜೀವನ ಚರಿತ್ರೆ ಆಧಾರಿತ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ. ಬಾಲಿವುಡ್ನಲ್ಲಿ ಬಯೋಪಿಕ್ ಸಿನಿಮಾ ಮಾಡುವುದೇ ಒಂದು ಟ್ರೆಂಡ್ ಆಗಿದೆ. ಇದೀಗ ಕರ್ನಾಟಕವಲ್ಲದೇ ದೇಶ ವಿದೇಶಗಳಲ್ಲಿ ಕಾಫಿ ಡೇ ಮೂಲಕ ಹೆಸರಾಗಿದ್ದ ಉದ್ಯಮಿ ವಿ.ಜಿ.ಸಿದ್ದಾರ್ಥ ಹೆಗ್ಡೆಯವರ ಬಯೋಪಿಕ್ ತೆರೆ ಮೇಲೆ ತರಲು ವೇದಿಕೆ ಸಜ್ಜಾಗಿದೆ.
ಬಾಲಿವುಡ್ ನಿರ್ಮಾಣ ಸಂಸ್ಥೆಗಳಾದ ಟೀ ಸಿರೀಸ್ ಫಿಲ್ಮ್ಸ್, ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ಹಾಗೂ ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್ ಸಂಸ್ಥೆ ಕಾಫಿ ಕಿಂಗ್ ಸಿದ್ದಾರ್ಥ ಹೆಗ್ಡೆ ಅವರ ಜೀವನಾಧಾರಿತ ಚಿತ್ರ ಮಾಡಲು ಸಿದ್ಧವಾಗಿವೆ.
ಕಾಫಿ ಡೇ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಸಿದ್ದಾರ್ಥ ಹೆಗ್ಡೆ, ಉದ್ಯಮ ಲೋಕದಲ್ಲಿ ಅಗ್ರ ಸಾಧನೆ ಮಾಡಿದ್ದವರು. ಸಿದ್ದಾರ್ಥ ಕಟ್ಟಿದ ಕಾಫಿ ಡೇ ಸಾಮ್ರಾಜ್ಯ, ಅವರು ಸಾಗಿಬಂದ ದಾರಿ ನಿಜಕ್ಕೂ ಕೋಟ್ಯಂತರ ಯುವಕರು ಹಾಗೂ ಉದ್ಯಮಿಗಳಿಗೆ ಮಾದರಿ. ಆದರೆ, ಹೆಗ್ಡೆಯವರು 2019ರ ಜುಲೈ 31ರಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಜೀವನದ ಏಳು-ಬೀಳು, ಕಾಫಿ ಡೇ ಕಟ್ಟಿ ಬೆಳೆಸಿದ ರೀತಿ, ಹೀಗೆ ಹಲವಾರು ವಿಚಾರಗಳನ್ನು ಸಿನೆಮಾದಲ್ಲಿ ತೆರೆದಿಡಲಾಗುತ್ತಿದೆ.